ಸಂತೇಬಾಗಿಲು:- ಹೊರಸುತ್ತು ಕೋಟೆಯ ಉತ್ತರ ದಿಕ್ಕಿನ ಅಂದರೆ ಈಗಿನ ಗಾಂಧಿ ವೃತ್ತಕ್ಕೆ ಮಾರ್ಗ ಜೋಡಿಸುವ ಮಹಾದ್ವಾರವನ್ನು ಸಂತೇಬಾಗಿಲು ಎನ್ನಲಾಗುತ್ತದೆ. ಇದರ ಮೂಲ ಹೆಸರು ಸಂಪಿಗೆಸಿದ್ಧೇಶ್ವರ (ಸಿದ್ಧಯ್ಯ)ನ ಬಾಗಿಲು. ಇದರ ಮುಂಭಾಗದಲ್ಲಿ ಚೌಕಾಕಾರದ ಅಂಕಣ. ದ್ವಾರದ ಮೇಲ್ಭಾಗದಲ್ಲಿ ಆನೆಯ ಮೂರ್ತಿಗಳು ಇರುವುದರಿಂದ ಇದನ್ನು ಆನೆಬಾಗಿಲು ಎಂದು ಕರೆಯುತ್ತಾರೆ.

ಈ ಬಾಗಿಲ ಬಳಿ ಸಂತೆ ನಡೆಯುತ್ತಿದ್ದುದರಿಂದ ಸಂತೆಬಾಗಿಲು ಎಂಬ ಹೆಸರೂ ಪ್ರಚಾರದಲ್ಲಿದೆ. ಇದಕ್ಕೆ ಹೊಂದಿಕೊಂಡಿರುವ ಅಂಕಣದಲ್ಲಿ ಹಿಂದೆ ಆನೆಕಾಳಗ, ಹುಲಿಕಾಳಗ, ಕುಸ್ತಿಪಂದ್ಯ ಮುಂತಾದ ರಾಜ ಕ್ರೀಡೆಗಳು ನಡೆಯುತ್ತಿದ್ದವು. ಇದರ ಪೂರ್ವಕ್ಕಿದ್ದ ಬಾಗಿಲಿನಲ್ಲಿ ಲಕ್ಷ್ಮೀನಾರಾಯಣ ಗುಡಿಯಿದೆ. ಅದರ ಅಂಕಣದಲ್ಲಿ ಕೋಟೆಬಾಗಿಲು ಆಂಜನೇಯ ಮತ್ತು ಸಂವೃಷ್ಟಿ ಆಂಜನೇಯ ಎಂಬ ಎರಡು ಗುಡಿಗಳಿವೆ. ಈ ಕೋಟೆಯ ಒಳ ಆವರಣದಲ್ಲಿ ಹಿಂದೆ ರಾಜಬೀದಿಗಳಾಗಿದ್ದ ಚಿಕ್ಕಪೇಟೆ, ದೊಡ್ಡಪೇಟೆ, ಕರುವಿನಕಟ್ಟೆ, ಬುರುಜನಹಟ್ಟಿ ಬಡಾವಣೆಗಳಿವೆ. ದೊಡ್ಡಪೇಟೆ ರಸ್ತೆ ಮತ್ತು ಸಂತೆಬಾಗಿಲ ಬಳಿ ಆರಂಭವಾಗುವ ಚಿಕ್ಕಪೇಟೆ ರಸ್ತೆಗಳು ಸಂಧಿಸುವ ಸ್ಥಳದ ಪಶ್ಚಿಮ ದಿಕ್ಕಿನಲ್ಲಿ ಉತ್ಸವಾಂಬಾ ದೇವಾಲಯವಿದೆ. ಚಿತ್ರದುರ್ಗದಲ್ಲೇ ದೊಡ್ಡದಾದ ದೇವಸ್ಥಾನವಾಗಿದ್ದು, ದೊಡ್ಡಪೇಟೆಯಲ್ಲಿ ವಿಜೃಂಭಣೆಯ ಉತ್ಸವ ನಡೆಯುತ್ತಿತ್ತು. ಆದ್ದರಿಂದ ಅದನ್ನು ರಥದಬೀದಿ ಎಂದೂ ಕರೆಯುತ್ತಿದ್ದರು. ಪಾಳೆಯಗಾರರ ಮನೆ ದೇವತೆಯಾದ ಈ ದೇವಿಯನ್ನು ಜನ ಉಚ್ಚಂಗಮ್ಮ ಎನ್ನುತ್ತಾರೆ.

ಲಾಲ್‌ಗಡದ ಬತೇರಿ ಬಾಗಿಲು :– ಇದು ಮೊದಲ ಸುತ್ತು ಕೋಟೆಯ ದಕ್ಷಿಣ ದಿಕ್ಕಿನಲ್ಲಿರುವ ಮಹಾದ್ವಾರ. ಪಾಳೆಯಗಾರರ ಆರಾಧ್ಯದೈವ ಅಹೋಬಲ ನರಸಿಂಹನ ಹೆಸರನ್ನು ಇಡಲಾಗಿದೆ. ಈ ಪ್ರದೇಶದಲ್ಲಿರುವ ಎರಡು ಬತೇರಿಗಳನ್ನು ಅಕ್ಕತಂಗಿ ಜೋಡುಬತೇರಿ ಎನ್ನುತ್ತಾರೆ. ಈ ಭಾಗದ ಕೋಟೆ ಮತ್ತು ಬತೇರಿಗಳಿಗೆ ಕೆಂಪು ಕಲ್ಲನ್ನು ಬಳಸಿರುವುದರಿಂದ ಲಾಲ್‌ಗಡದ ಬತೇರಿ ಕೋಟೆ ಬಾಗಿಲು ಎಂಬ ಹೆಸರು ಬಂದಿದೆ. ಈ ಭಾಗದ ಕಂದಕದ ಮೇಲೆ ಹಿಂದೆ ಎಳೆಯುವ ಸೇತುವೆ ಇದ್ದ ಕುರುಹುಗಳಿವೆ. ಇಲ್ಲಿರುವ ಬತೇರಿಗಳ ಮೇಲೆ ಪಹರೆ ಗೃಹಗಳಿವೆ. ಶಸ್ತ್ರಾಸ್ತ್ರಗಳನ್ನುಇಡಲು ಬತೇರಿಯ ದಿಂಡುಗಳಲ್ಲಿ ಗೂಡುಗಳನ್ನು ಮಾಡಿದ್ದಾರೆ. ಸಮೀಪದಲ್ಲಿ ಕಂದಕಕ್ಕೆ ಹೊಂದಿಕೊಂಡಂತೆ ಕತ್ತರಿ ಬಾಗಿಲೆಂಬ ಕಳ್ಳಹಾದಿ ಇದೆ. ದ್ವಾರದ ಎಡಕೋಟೆಯಲ್ಲಿ ಹಿರೇಮೆದಕೇರಿ ನಾಯಕನಿಗೂ, ಹರಪನಹಳ್ಳಿಯ ಸೋಮಶೇಖರ ನಾಯಕನಿಗೂ ನಡೆದ ಕಾಳಗವನ್ನು ಚಿತ್ರಿಸಲಾಗಿದೆ.

ಲೇಖನ ಸಂಗ್ರಹಕಾರರು :
ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು,

ಚಿತ್ರದುರ್ಗ.ಮೊ: 9448664878.