ಚಿತ್ರದುರ್ಗ: ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಿಸುವ ವ್ಯಕ್ತಿಗಳೇ ಇಲ್ಲದೇ ವೇಳೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಸವರಾಜ್ ಮಂಡಿಮಠ್ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿ, ಬಿಜೆಪಿ ಪಡೆಯಲ್ಲಿ ಕನಸನ್ನು ಬಿತ್ತಿದ ವ್ಯಕ್ತಿ ಮಂಡಿಮಠ್ ಮೇಸ್ಟ್ರು.
ನಂತರ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಮಲದ ಚಿಹ್ನೆಯಡಿ ಚಳ್ಳಕೆರೆ ತಿಪ್ಪೇಸ್ವಾಮಿ ಅವರ ವಿರುದ್ಧ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಇದಕ್ಕೆ ಕಾರಣ ಅವರು ಚಳ್ಳಕೆರೆ ಕ್ಷೇತ್ರದಲ್ಲಿ ಅವರು ನಡೆಸುತ್ತಿದ್ದ ವ್ಯವಹಾರ ಜತೆಗೆ ಮೇಸ್ಟ್ರು ಆಗಿ ಕೆಲಸ ಮಾಡಿದ್ದು.

ಈಗಿನ ವಿಧಾನಸಭಾ ಚುನಾವಣೆಯಲ್ಲಿ ಬಾಳೆಕಾಯಿ ರಾಮ್‌ದಾಸ್ ಅವರಿಗೆ ಟಿಕೆಟ್ ಕೊಡಿಸಿಯೇ ಸಿದ್ಧ ಎಂದು ಮುನ್ನುಗಿದ ಮಂಡಿಮಠ್ ಮೇಸ್ಟ್ರು ಒಂದು ರೀತಿಯಲ್ಲಿ ಟಿಕೆಟ್ ಖಚಿತವಾಗಿದ್ದು, ರಾಮದಾಸ್ ಹಾಗೂ ತಮ್ಮ ಮನೆಗೆ ಬಿಜೆಪಿ ಪಟ್ಟಿ ಪ್ರಕಟ ವೇಳೆ ಪೊಲೀಸ್ ಭದ್ರತೆ ತೆಗೆದುಕೊಂಡಿದ್ದರು. ಕಾರಣ ಬಿಜೆಪಿ ಟಿಕೆಟ್ ರಾಮ್‌ದಾಸ್‌ಗೆ ಖಚಿತವೆಂಬ ವಿಶ್ವಾಸ. ಆದರೆ, ಪಟ್ಟಿ ಪ್ರಕಟದಲ್ಲಿ ಎಲ್ಲವೂ ಉಲ್ಟಾ ಆಗಿತ್ತು. ಇದರಿಂದ ಬಿಜೆಪಿ ಮನೆಯಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಆಗಿತ್ತು. ಒಳಗೆ ಭಿನ್ನಮತ ಹೊಗೆಯಾಡುತ್ತಲೇ ಇತ್ತು.

ಈ ಎಲ್ಲ ಒಳ ಭಿನ್ನಮತದ ಸುಳಿವು ಅರಿತಿದ್ದು ಕಾಂಗ್ರೆಸ್ ಹಾಲಿ ಶಾಸಕ ಟಿ. ರಘುಮೂರ್ತಿ ಮಂಡಿಮಠ್ ಅವರನ್ನು ತನ್ನತ್ತ ಸೆಳೆಯಲು ಎಲ್ಲ ಪ್ರಯತ್ನ ಪಡೆದಿದ್ದರು. ಆದರೆ, ಕೊನೆಗಳಿಗೆಯಲ್ಲಿ ಮೇಸ್ಟ್ರು ತೆನೆ ಹೊರಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಮೇ 02ರಂದು ಮೇಸ್ಟ್ರು ಜೆಡಿಎಸ್ ತೆಕ್ಕೆಗೆ ಸೇರುವುದು ಖಚಿತವಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ವೇದಿಕೆ ಸಿದ್ಧವಾಗಿದೆ ಎನ್ನಲಾಗಿದೆ.

ಇದರಿಂದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆಯಿಂದ ನಮಗೆ ಅನುಕೂಲವಾಗಲಿದೆ ಎಂದು ಭಾವಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಟಿ. ರಘುಮೂರ್ತಿ, ಬಿಜೆಪಿ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿ ತತ್ತರಿಸಿದ್ದಾರೆ.