ಚಿತ್ರದುರ್ಗ: ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತಕ್ಕೆ ಒಳಪಟ್ಟ ಶಾಖಾಮಠವಾದ ಚನ್ನಗಿರಿಯ ಶ್ರೀ ಹಾಲಸ್ವಾಮಿ ವಿರಕ್ತಮಠದಲ್ಲಿಂದು ಡಾ. ಶಿವಮೂರ್ತಿ ಮುರುಘಾ ಶರಣರು ನೂತನ ಶ್ರೀಗಳಿಗೆ ಬಸವತತ್ವೋಪದೇಶ ಮತ್ತು ಸಮಾಜಸೇವಾ ದೀಕ್ಷೆ (ಚರಪಟ್ಟಾಧಿಕಾರ) ನೆರವೇರಿಸಿದರು.

ನಂತರ ಭಕ್ತರನ್ನುzಶಿಸಿ ಮಾತನಾಡಿದ ಶ್ರೀಗಳು, ಹಾಲಸ್ವಾಮಿ ವಿರಕ್ತಮಠದ ಲಿಂಗೈಕ್ಯ ಶ್ರೀ ಜಯದೇವ ಸ್ವಾಮಿಗಳ ಆಶಯದಂತೆ ಶ್ರೀ ಚಂದ್ರಮೋಹನ ದೇವರು ಅವರನ್ನು ಚನ್ನಗಿರಿ ವಿರಕ್ತಮಠಕ್ಕೆ ಡಾ. ಶ್ರೀ ಬಸವ ಜಯಚಂದ್ರ ಸ್ವಾಮಿಗಳು ಎಂಬ ನೂತನ ನಾಮಾಂಕಿತದೊಂದಿಗೆ ನೇಮಕ ಮಾಡಿ ಸಮಾಜಸೇವಾದೀಕ್ಷೆ (ಚರಪಟ್ಟಾಧಿಕಾರ)ವನ್ನು ಅನುಗ್ರಹಿಸಲಾಗಿದೆ ಎಂದು ತಿಳಿಸಿದರು.

ಭಾರತೀಯ ಪರಂಪರೆಯಲ್ಲಿ ಅವಿಚ್ಛಿನ್ನವಾದ ಪರಂಪರೆ ಎಂದರೆ ಮಠ ಪರಂಪರೆ. ಇದು ತುಂಬಾ ಆಪ್ತವಾದ ಪರಂಪರೆಯಾಗಿದ್ದು, ಜೀವನವನ್ನು ಹದಗೊಳಿಸುವಂಥದ್ದು. ಜನಮುಖಿ ಕಾರ್ಯಗಳೆ ಒಂದು ಮಠ ಮತ್ತು ಪೀಠದ ನಿಜವಾದ ಅಸ್ತಿತ್ವ. ಅದುವೇ ಇತಿಹಾಸ. ಅಂತೆಯೇ ಜಂಗಮ ಸದಾ ಚಲನಶೀಲವಾಗಿರಬೇಕು. ಚಲನಶೀಲತೆಯೇ ಕ್ರಿಯಾಶೀಲತೆ. ಕ್ರಿಯಾಶೀಲತೆಯೇ ಜಂಗಮತ್ವ. ಜಂಗಮತ್ವ, ಕ್ರಿಯಾಶೀಲತೆಗೆ ಬದುಕು ಸಮರ್ಪಿಸುವವನೇ ನಿಜವಾದ ಸಾಧಕನಾಗಲು ಸಾಧ್ಯ ಎಂದು ಹೇಳಿದರು.

ಮಠ ಮತ್ತು ಘಟ ಇವೆರಡು ಒಂದಾಗಿ ಘಟಕವಾಗಬೇಕು. ಸ್ವಾಮಿಗಳು ಸಮಾಜದ ಮಕ್ಕಳು. ಅವರು ಸಮಾಜದ ಸ್ವಾಸ್ತ್ಯಕ್ಕಾಗಿ ಬದುಕುತ್ತಾರೆ. ಸಮಾಜವೂ ಸಹ ಮಠದ ಜವಾಬ್ದಾರಿ ಹೊತ್ತುಕೊಳ್ಳಬೇಕು. ಸ್ವಾಮಿಗಳು ಸಹ ಪೂರ್ಣವಾದ ಮಠದ ಜವಾಬ್ದಾರಿ ತೆಗೆದುಕೊಳ್ಳಬೇಕು. ಗುರುಸಾಕ್ಷಿ, ಧರ್ಮಸಾಕ್ಷಿ, ದೈವಸಾಕ್ಷಿ ಸ್ವಾಮಿಗಳಿಗೆ ಬೇಕು. ಅಂತರ್ಮುಖಿ ಸಾಧನೆ ಮಾಡಬೇಕು. ಇದರಲ್ಲಿ ಪರಮಾನಂದ ಸಿಗುತ್ತದೆ. ಬಸವಣ್ಣ ಎಂದರೆ ಸಮೂಹ, ಸಮಾಜ. ಎಲ್ಲ ದೇಶಗಳ ಪಾರ್ಲಿಮೆಂಟ್‌ಗೆ ತಾಯಿ ಯಾವುದೆಂದರೆ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ. ನಮ್ಮೆಲ್ಲರ ಆದರ್ಶ ಎಂದರೆ ಬಸವಣ್ಣನವರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೊಳದಮಠದ ಡಾ. ಶಾಂತವೀರ ಮಹಾಸ್ವಾಮಿಗಳು, ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು, ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮಿಗಳು, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳು, ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಸ್ವಾಮಿಗಳು, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು, ಬ್ಯಾಡಗಿ ಮುಪ್ಪಿನಸ್ವಾಮಿ ವಿರಕ್ತಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು, ತಿಳವಳ್ಳಿ ಕಲ್ಮಠದ ಶ್ರೀ ಬಸವ ನಿರಂಜನ ಸ್ವಾಮಿಗಳು, ನಿಪ್ಪಾಣಿ ಮುರುಘೇಂದ್ರ ಮಠದ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ನಾಗಗೊಂಡನಹಳ್ಳಿ ಚೆಲುಮೇರುದ್ರಸ್ವಾಮಿ ಮಠದ ಶ್ರೀ ಬಸವ ಕಿರಣ ಸ್ವಾಮಿಗಳು, ಕೊಡ್ಲಿಪೇಟೆ ಕಲ್ಲಳ್ಳಿಮಠದ ಶ್ರೀ ರುದ್ರಮುನಿಗಳು ಸ್ವಾಮಿಗಳು, ಗುಬ್ಬಿಯ ನಾಗರಾಜ ದೇವರು, ಧಾರವಾಡದ ಶಶಾಂಕ ದೇವರು, ಸದಾಶಿವಪೇಟೆ ಶ್ರೀಗಳು ಮೊದಲಾದವರು ಭಾಗವಹಿಸಿದ್ದರು.