ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಗಾಜನೂರಿನಲ್ಲಿ ಸೆಲ್ಫಿ ತೆಗೆಯಲು ಮುಂದಾಗಿದ್ದ ಯುವಕನೋರ್ವ ತುಂಗಾ ನದಿಗೆ ಬಿದ್ದು ನೀರು ಪಾಲಾಗಿದ್ದಾನೆ ಈ ಘಟನೆಯು ಮಂಗಳವಾರ ನಡೆದಿದೆ.

ಶಿವಮೊಗ್ಗದ ಜಿಲ್ಲೆಯ ಗಾಜನೂರು ಡ್ಯಾಂಗೆ ಕುಟುಂಬ ಮತ್ತು ಕುಟುಂಬಸ್ಥರ ಸ್ನೇಹಿತರ ಜೊತೆ ಬಂದಿದ್ದ ವಿನಾಯಕ ಎಂಬ 22 ವರ್ಷದ ಯುವಕ, ಗಾಜನೂರಿನ ಪಂಪ್ ಹೌಸ್ ಬಳಿ ನಿಂತು ಫೋನ್‌ನಲ್ಲಿ ಸೆಲ್ಫಿ ತೆಗೆಯುವ ವೇಳೆ ಜಾರಿ ತುಂಗಾ ನದಿ ನೀರಿಗೆ ಬಿದ್ದಿದ್ದಾನೆ.

ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ವಿನಾಯಕನ ಪತ್ತೆಗಾಗಿ ಶೋಧಕಾರ್ಯ ನಡೆಸಿದರು. ಆ ವೇಳೆಗಾಗಲೇ ಯುವಕ ಮೃತಪಟ್ಟಿದ್ದನು. ಸತತ ಮೂರು ಗಂಟೆಯ ಶೋಧಕಾರ್ಯ ನಂತರ ಆತನ ಮೃತ ದೇಹ ಪತ್ತೆಯಾಗಿದೆ. ಗಾಜನೂರು ಅಣೆಕಟ್ಟು ಪಂಪ್ ಹೌಸ್ ಬಳಿ ನೀರು ಹರಿಯದಂತೆ ನೋಡಿಕೊಳ್ಳಲಾಗಿದೆ. ಘಟನೆ ನಡೆದ ಸ್ಥಳದಿಂದ 200 ಮೀಟರ್ ದೂರದಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ.

ಮೃತ ಯುವಕ ವಿನಾಯಕನು ಶಿವಮೊಗ್ಗ ನಗರದ ಸವಳಂಗ ರಸ್ತೆಯ ನಿವಾಸಿ ಸುಕುಮಾರ್ ಅವರ ಪುತ್ರನಾಗಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.