ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಬೆಂಗಳೂರಿನಲ್ಲಿ ಹಾಗೂ ಯಾವುದೇ ಜಿಲ್ಲೆಯಲ್ಲಿ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದೆಲ್ಲೆಡೆ ಕರೊನಾ ವೈರಸ್​ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಕೋವಿಡ್​ ನಿಯಂತ್ರಣ ಮಾಡುವುದರಲ್ಲಿ ಪ್ರಾರಂಭದಲ್ಲಿ ನಾವು ಯಶಸ್ವಿಯಾಗಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹಾಗೂ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುವುದೇನೆಂದರೆ, ಇದನ್ನು ತೊಲಗಿಸಲು ಲಾಕ್​ಡೌನ್​ ಒಂದೇ ಪರಿಹಾರವಲ್ಲ. ಜನರು ಕೋವಿಡ್​ ತೊಲಗಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾಸ್ಕ್​ಗಳನ್ನು ಪ್ರತಿಯೊಬ್ಬರು ಧರಿಸಬೇಕು ಎಂದು ಮನವಿ ಮಾಡಿದರು.

ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ನೀವು ಎಷ್ಟರಮಟ್ಟಿಗೆ ಕಟ್ಟುನಿಟ್ಟಾಗಿ ಪಾಲನೇ ಮಾಡ್ತಿರೋ ಅಷ್ಟರಮಟ್ಟಿಗೆ ಕೋವಿಡ್​ ತಡೆಯಲು ನಮ್ಮಿಂದ ಸಾಧ್ಯ. ಈಗಾಗಲೇ ನಮ್ಮೆಲ್ಲ ಸಚಿವರು, ಶಾಸಕರು, ವೈದ್ಯರು, ನರ್ಸ್​ಗಳು, ಪೊಲೀಸರು ಹಾಗೂ ಆಶಾ ಕಾರ್ಯಕರ್ತರು ಕೋವಿಡ್​ ತಡೆಯಲು ತಮ್ಮ ಜೀವವನ್ನೇ ಪಣವಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ನಾವು ಬದುಕುಳಿಯಬೇಕಾದರೆ, ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಕಡ್ಡಾಯವಾಗಿ ಧರಿಸುವುದು ಮುಂತಾದ ಕ್ರಮಗಳನ್ನು ಪಾಲಿಸುವುದರಿಂದ ಕರೊನಾ ತಡೆಯಲು ಸಾಧ್ಯ ಎಂದು ತಿಳಿಸಿದರು