ಬೆಂಗಳೂರು: ಕೋವಿಡ್​ ನಿರ್ವಹಣೆಯಲ್ಲಿ ಒಂದು ರೂಪಾಯಿ ಕೂಡ ಅವ್ಯವಹಾರ ಆಗಿಲ್ಲ. ಇದನ್ನು ಸಾಬೀತು ಪಡಿಸಿದ್ರೆ ರಾಜೀನಾಮೆ ಕೊಡುವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.

ಪಿಪಿಇ ಕಿಟ್, ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್, ಸರ್ಜಿಕಲ್ ಗ್ಲೌಸ್, ವೆಂಟಿಲೇಟರ್​ಗಳಿಗೆ ಒಟ್ಟಾರೆ ಈವರೆಗೆ ಖರ್ಚು ಮಾಡಿದ್ದೇ 79 ಕೋಟಿ ರೂಪಾಯಿ. ಹೀಗಿರುವಾಗ ನೂರಾರು ಕೋಟಿ ರೂ. ವ್ಯವಹಾರ ಎಲ್ಲಿಂದ ಬಂತುಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ.

ಪ್ರತಿಯೊಂದು ಖರೀದಿಯಲ್ಲಿ ಪಾರದರ್ಶಕತೆ ಇದೆ. ಕೇಂದ್ರ ಸರ್ಕಾರ ಸೂಚಿಸಿದ ಕಂಪನಿಗಳು ಅಥವಾ ಟೆಂಡರ್ ಮೂಲಕವೇ ವ್ಯವಹಾರ ನಡೆದಿದೆ ಎಂದು ಸಮರ್ಥಿಸಿಕೊಂಡರು.

ಕೋವಿಡ್​ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸುತ್ತಲೇ ಇರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕರೊನಾ ನಿಯಂತ್ರಣದ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತಲೇ ಇದ್ದಾರೆ. ಅಭಿಯಾನ ಕೂಡ ಮಾಡಿದ್ದರು.  ಆದರೆ ಒಂದೇ  ರೂಪಾಯಿ ಅವ್ಯವಹಾರ ಸಾಬೀತು ಪಡಿಸಿದ್ರೆ ರಾಜೀನಾಮೆ ಕೊಡುವೆ ಎಂದು ಸವಾಲು ಹಾಕಿದ್ದಾರೆ.