ಚಿತ್ರದುರ್ಗ: ಜಿಲ್ಲೆಯಲ್ಲಿ ಕೋಳಿಶೀತ ಜ್ವರ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲು ಎಲ್ಲಾ ಕುಕ್ಕುಟ ಸಾಕಾಣಿಕೆ ಹಾಗೂ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ ಎಂದು ಪಶುಸಂಗೊಪನಾ ಇಲಾಖೆ ಉಪನಿರ್ದೇಶಕ ಡಾ; ಟಿ.ಕೃಷ್ಣಪ್ಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ  ಈಗಾಗಲೇ ಕೈಗೊಂಡಿರುವ ಮಾಸಿಕ ಕೋಳಿಶೀತ ಜ್ವರ ಸರ್ವೇಕ್ಷಣೆ ಕಾರ್ಯಕ್ರಮದ ಮಾದರಿಗಳ ಜೊತೆ ಪ್ರತಿ ವಾರ ಕುಕ್ಕಟ ಕ್ಷೇತ್ರಗಳು, ಕೋಳಿ ಮಾರುಕಟ್ಟೆ ಸ್ಥಳಗಳು, ನೀರು ಸಂಗ್ರಹಣ ತಾಣಗಳಿಂದ, ಪಕ್ಷಿಧಾಮಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸುವುದು. ಕೋಳಿ ಸಾಕಾಣಿಕೆದಾರರೊಂದಿಗೆ ಸಭೆ ನಡೆಸಿ, ಕೋಳಿ ಫಾರಂಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವುದು, ಕೋಳಿ ಮತ್ತು ಮೊಟ್ಟೆ ಸಾಗಾಣಿಕೆ ವಾಹನಗಳಿಗೆ ನಂಜುನಾಶಕ  ಸಿಂಪಡಿಸುವುದು. ಹಾಗೂ ಕೆಲಸಗಾರರಿಗೆ ಸುರಕ್ಷಿತ ಸಾಮಾಗ್ರಿಗಳಾದ ಮಾಸ್ಕ್, ಗ್ಲೌಸ್ ಒದಗಿಸುವುದು. ಕೋಳಿ ಮಾಂಸ ಮಾರಾಟ ಕೇಂದ್ರಗಳಲ್ಲಿ ಸ್ವಚ್ಚತೆ ಕಾಪಾಡುವುದು. ಅರಣ್ಯ ಪ್ರದೇಶಗಳಲ್ಲಿ  ನೀರು ಸಂಗ್ರಹಣಾ ತಾಣಗಳಲ್ಲಿ ಕಾಡು ಹಕ್ಕಿಗಳು, ವಲಸೆ ಹಕ್ಕಿಗಳು ಇತರೆ ಯಾವುದೇ ಹಕ್ಕಿಗಳಲ್ಲಿ ಅಸಹಜ ಸಾವು ಕಂಡುಬಂದಲ್ಲಿ ಹತ್ತಿರದ ಪಶು ವೈದ್ಯ ಆಸ್ಪತ್ರೆ ಅಧಿಕಾರಿ ಅಥವಾ ಸಿಬ್ಬಂದಿಗೆ ತಿಳಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಹಳ್ಳಿಗಳು ಮತ್ತು ನಗರಗಳಲ್ಲಿ ಹಿತ್ತಲ ಕೋಳಿಗಳು, ಕಾಗೆಗಳು, ಕಾಡು ಹಕ್ಕಿಗಳು, ವಲಸೆ ಹಕ್ಕಿಗಳಲ್ಲಿ ಅಸಹಜ ಸಾವು ಕಂಡುಬಂದಲ್ಲಿ ಮೃತಪಟ್ಟ ಹಕ್ಕಿಗಳನ್ನು ಮುಟ್ಟದೇ ಸಾರ್ವಜನಿಕರು ಮತ್ತು ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು ಪಶು ವೈದ್ಯ ಆಸ್ಪತ್ರೆ ಅಧಿಕಾರಿಗೆ ತಿಳಿಸಬೇಕು.

ಜಿಲ್ಲೆಯ ಅಂತರ್ ರಾಜ್ಯ ಗಡಿ ಪ್ರದೇಶ ಮೊಳಕಾಲ್ಮೂರು ತಾಲ್ಲೂಕು ಎದ್ದಲು ಬೊಮ್ಮಯ್ಯನಹಟ್ಟಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಕೋಳಿ ಮತ್ತು ಮೊಟ್ಟೆ ಸಾಗಾಣಿಕೆ ವಾಹನಗಳಿಗೆ  ತಪಾಸಣೆ ನಡೆಸಿ ನಂಜುನಾಶಕ ಔಷಧಿ ಸಿಂಪಡಿಸಿ, ಶುಚಿತ್ವ ಕಾಪಾಡದ ವಾಹನಗಳನ್ನು ಗಡಿಯಲ್ಲಿಯೇ ತಡೆದು ಹಿಂದಿರುಗಿಸಲಾಗುವುದು.  ಎಲ್ಲಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪಶು ವೈದ್ಯರನ್ನೊಳಗೊಂಡ 54 ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಿ, ಸೂಕ್ತ ಮಾಹಿತಿ ನೀಡಿ ರೋಗ ನಿಯಂತ್ರಣ, ಸರ್ವೇಕ್ಷಣೇ ಮತ್ತು ರೋಗೋದ್ರೇಕ ಸಂದರ್ಭದಲ್ಲಿ ಕೈಗೊಳ್ಳುವ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ನೀಡುವುದು. ಜಿಲ್ಲೆಯಲ್ಲಿ 135 ಕೋಳಿ ಫಾರಂಗಳು ಹಾಗೂ 72421 ಹೆಕ್ಟೇರ್ ಅರಣ್ಯ ಪ್ರದೇಶ, 59 ನೀರು ಸಂಗ್ರಹಣಾ ತಾಣಗಳು, 17638 ಹಿತ್ತಲ ಕೋಳಿ ಸಾಕಾಣಿಕೆ ಮಾಡುವ ಕುಟುಂಬಗಳು ಇದ್ದು ಇವುಗಳ ಮೇಲೆ ಆಯಾ ವ್ಯಾಪ್ತಿಯ ಕ್ಷಿಪ್ರ ಕಾರ್ಯಪಡೆಗಳು ನಿಗಾ ಇಟ್ಟು ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ಅನಗತ್ಯವಾಗಿ ಹಕ್ಕಿ ಜ್ವರದ ಬಗ್ಗೆ ಭಯಭೀತರಾಗದೇ ಇಲಾಖೆಯೊಂದಿಗೆ ಸಹಕರಿಸಿ. ಕೋಳಿ ಮತ್ತು ಮೊಟ್ಟೆ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಹಾಗೂ ಚೆನ್ನಾಗಿ ಬೇಯಿಸಿದ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ವಲಸೆ ಪಕ್ಷಿಗಳ ಸಂಪರ್ಕ, ಕಲುಷಿತ ನೀರು, ಆಹಾರ ಹಾಗೂ ಉಪಕರಣಗಳು. ಒಂದು ಕೋಳಿ ಫಾರಂನಿಂದ ಇನ್ನೊಂದು ಫಾರಂಗಳಿಗೆ ಸೋಂಕು ತಗುಲಿದ ಪಕ್ಷಿಯಿಂದ, ಉಪಕರಣ, ಹಕ್ಕಿಗಳ ಮಲದಿಂದ ರೋಗ ಹರಡುತ್ತದೆ. ಸೋಂಕು ತಗುಲಿದ ಮತ್ತು ಸೋಂಕು ತಗುಲಬಹುದಾದ ಹಕ್ಕಿಗಳ ನಡುವಿನ ನೇರ ಸಂಪರ್ಕದಿಂದ. ಸೋಂಕಿತ ಹಕ್ಕಿಗಳ ಹಿಕ್ಕೆಗಳು,  ಮೊಟ್ಟೆತಟ್ಟೆಗಳು, ಪಂಜರಗಳು, ಮೊಟ್ಟೆ ಸಾಗಣೆ ವಾಹನಗಳಿಂದ ರೋಗ ಹರಡುತ್ತದೆ.

ರೋಗ ಲಕ್ಷಣಗಳು;ಕುಗ್ಗಿದ ಚಟುವಟಿಕೆ ಆಹಾರ ಸೇವನೆ ಕಡಿಮೆಯಾಗುವುದು, ಮೊಟ್ಟೆಗಳನ್ನು ನೀಡುವ ಕೋಳಿಗಳಲ್ಲಿ ಮೊಟ್ಟೆಗಳ ಇಳುವರಿ ಕಡಿಮೆಯಾಗುವುದು, ಕೆಮ್ಮು, ಸೀನು, ಉಸಿರಾಡುವಾಗ ಗೊರ ಗೊರ ಸದ್ದು, ಕಣ್ಣೀರು ಸುರಿಕೆ, ಮುದುರಿಕೊಳ್ಳುವುದು, ನಲುಗಿದ ರೆಕ್ಕೆಗಳು, ತಲೆ ಮತ್ತು ಮುಖದ ನೀರೂತ, ಪುಕ್ಕಗಳಿಲ್ಲದಿರುವಲ್ಲಿ ಚರ್ಮದ ನೀಲಿಗಟ್ಟುವಿಕೆ ಹಾಗೂ ಕೆಲವು ಪ್ರಕರಣಗಳಲ್ಲಿ ರೋಗ ಶೀಘ್ರವಾಗಿ ವಿಷಕಾರಿಯಾಗಿ ಹಕ್ಕಿಗಳು ಯಾವುದೇ ಚಿಹ್ನೆಗಳಿಲ್ಲದೇ ಸಾಯಬಹುದು.

ರೋಗ ಲಕ್ಷಣಗಳು ಕಂಡುಬಂದಾಗ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 9740927007  ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಚಿತ್ರದುರ್ಗ. 448816499 ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಚಳ್ಳಕೆರೆ. 7975623230 ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಹಿರಿಯೂರು. 9972965479 ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಹೊಳಲ್ಕೆರೆ. 9945298407 ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಹೊಸದುರ್ಗ. 9113633522 ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಮೊಳಕಾಲ್ಮೂರು. ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.