ಚಿತ್ರದುರ್ಗ: ಜಾತಿವಾದ ಕೋಮುವಾದವನ್ನು ದೇಶದಲ್ಲಿ ಬಿತ್ತುವ ಕೆಲಸ ಮಾಡುತ್ತಿರುವ ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ತರಬಾರದು ಎಂದು ಕೆ.ಪಿ.ಸಿ.ಸಿ.ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಎಂ.ಜಯಣ್ಣ ಕಾರ್ಯಕರ್ತರಿಗೆ ಕರೆ ನೀಡಿದರು.

ಅಭಿಮಾನಿಗಳ ಬಳಗದಿಂದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಇವರುಗಳೆಲ್ಲಾ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅವರ ವಂಶದ ಕುಡಿ ಯುವ ನೇತಾರ್ ರಾಹುಲ್‌ಗಾಂಧಿ ಈಗ ದೇಶದ ಪ್ರಧಾನಿಯಾಗಬೇಕಿದೆ. ಕಾಂಗ್ರೆಸ್‌ನಿಂದ ಮಾತ್ರ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರಕಲು ಸಾಧ್ಯ ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಮಹತ್ತರವಾದ ಕೊಡುಗೆಯನ್ನು ದೇಶದ ಯಾವ ರಾಜ್ಯದಲ್ಲಿಯೂ ನೀಡಲು ಆಗುವುದಿಲ್ಲ. ಯಾರು ಹಸಿವಿನಿಂದ ನರಳಬಾರದು ಎನ್ನುವ ಕಾರಣಕ್ಕಾಗಿ ಅನ್ನಭಾಗ್ಯ ಜಾರಿಗೆ ತಂದಿದ್ದಾರೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸಿದ್ದಾಂತದ ಮೇಲೆ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗಿರುವುದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ೨೨೪ ಕ್ಷೇತ್ರಗಳಲ್ಲಿ ಕನಿಷ್ಠ ೧೫೦ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ನೀಡಿರುವ ಶ್ರೇಷ್ಠವಾದ ಕೊಡುಗೆ ಸಂವಿಧಾನವನ್ನು ಒಂದು ವೇಳೆ ಬಿಜೆಪಿಯವರು ಬದಲಾವಣೆ ಮಾಡಿದ್ದೇ ಆದಲ್ಲಿ ಬಹುದೊಡ್ಡ ಕ್ರಾಂತಿಯನ್ನು ನಡೆಸಲಾಗುವುದು ಎಂದು ಕೋಮುವಾದಿಗಳಿಗೆ ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್‌ಜಬ್ಬಾರ್ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಪುಟ್ಟ ಪ್ರತಿಮೆಯನ್ನು ಎಂ.ಜಯಣ್ಣನಿಗೆ ನೀಡಿ ಗೌರವಿಸಿದರು.
ಇದೇ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್.ಸಿ.ವಿಭಾಗದ ನಗರಾಧ್ಯಕ್ಷರಾಗಿ ಅನೀಲ್‌ಕುಮಾರ್,ಜಿಲ್ಲಾ ಉಪಾಧ್ಯಕ್ಷರಾಗಿ ಬೈರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಕುಮಾರ್, ಕಾರ್ಯದರ್ಶಿಯಾಗಿ ಕೆಂಚಪ್ಪ, ಇವರುಗಳನ್ನು ನೇಮಕ ಮಾಡಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಉಪಾಧ್ಯಕ್ಷೆ ನಜ್ಮತಾಜ್, ಹನುಮಲಿ ಷಣ್ಮುಖಪ್ಪ, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್‌ಪಾಷ, ಜಿಲ್ಲಾ ಕಾಂಗ್ರೆಸ್ ಎಸ್.ಸಿ.ವಿಭಾಗದ ಅಧ್ಯಕ್ಷ ಡಿ.ರಾಜಪ್ಪ, ಸೇವಾದಳದ ಜಿಲ್ಲಾಧ್ಯಕ್ಷ ಅಶ್ರಫ್‌ಆಲಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎಸ್.ಸಿ.ವಿಭಾಗ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಟಿ.ಮಲ್ಲೇಶ್‌ಹಿರೆಹಳ್ಳಿ, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ದುರುಗೇಶ್, ಪ್ರಸನ್ನ, ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.