ಚಿತ್ರದುರ್ಗ: ನರೇಂದ್ರ ಮೋದಿಯವರು ಪ್ರಾರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ ಅವರು ಕೋಟೆಯ ನಾಡು ಚಿತ್ರದುರ್ಗದ ಮಹಾ ಜನತೆಗೆ ನನ್ನ ನಮಸ್ಕಾರಗಳು. ವೀರ ಮದಕರಿ ನಾಯಕ, ವೀರ ವನಿತೆ ಓಬವ್ವಗೆ ನನ್ನ ನಮನಗಳು, ಮಾದರ ಚನ್ನಯ್ಯ, ಮರುಘಾ ಶರಣರಿಗೆ ನನ್ನ ನಮಸ್ಕಾರಗಳು ಎಂದು ನರೇಂದ್ರ ಮೋದಿ ಭಾಷಣ ಆರಂಭಿಸಿದರು.

ಚಿತ್ರದುರ್ಗದಲ್ಲಿ ನಾನು ಜನಸಾಗರವನ್ನು ನೋಡುತ್ತಿದ್ದೇನೆ. ನಮಗೆ ಆಶೀರ್ವದಿಸಲು ಜನರು ಹರಿದುಬರುತ್ತಿದ್ದಾರೆ. ನಿಮಗೆಲ್ಲ ನಾನು ಅಭಾರಿಯಾಗಿದ್ದೇನೆ ಎಂದರು.

ಭಾಷಣದ ಹೈಲೈಟ್…

 • ಸಮಾಜ ಕಲ್ಯಾಣ ಇಲಾಖೆಯ ಸಚಿವರು ತಮ್ಮ ಕಲ್ಯಾಣವನ್ನು ಹೇಗೆ ಮಾಡಿಕೊಂಡಿದ್ದಾರೆ? ಎಂಬುದು ಚಿತ್ರದುರ್ಗದ ಪುಟ್ಟ ಮಕ್ಕಳಿಗೂ ಗೊತ್ತಿದೆ.
 • ಕಾಂಗ್ರೆಸ್ ಪಕ್ಷದವರಿಗೆ ಹಾಸಿಗೆ ಮೇಲೆ ಅಪಾರವಾದ ಪ್ರೀತಿ ಇದೆ. ನನಗೆ ಏಕೆ ಎಂದು ತಿಳಿಯಲಿಲ್ಲ. ಹಾಸಿಗೆಯಲ್ಲಿ ದುಡ್ಡು ಅಡಗಿಸಿ ಇಡುವುದರಿಂದ ಅವರಿಗೆ ಹಾಸಿಗೆ ಮೇಲೆ ಪ್ರೀತಿ ಇದೆ.
 • ಕಾಂಗ್ರೆಸ್ ಪಕ್ಷದ ಹಲವು ನಾಯಕರ ಹಿಂದೆ ಮುಂದೆ ಹಲವು ಉಪ ನಾಮಗಳಿವೆ. ಚಿತ್ರದುರ್ಗದಲ್ಲಿ ನಾನು ಕೇಳಿದ ಉಪನಾಮ ಡೀಲ್ ಮಂತ್ರಿ. ಡೀಲ್ ಆಗಲಿಲ್ಲ ಎಂದರೆ ಯಾವುದೇ ಬಿಲ್ ಪಾಸ್ ಆಗುವುದಿಲ್ಲ.
 • ಇಲ್ಲಿನ ಮುಖ್ಯಮಂತ್ರಿ ಸೂಟ್ ಕೇಸ್‌ನಲ್ಲಿ ಸಭ್ಯತೆಯ ಪ್ರಮಾಣ ಪತ್ರವಿಟ್ಟುಕೊಂಡು ಓಡಾಡುತ್ತಾರೆ. ಯಾವುದೇ ಸಚಿವರ ವಿರುದ್ಧ ಆರೋಪ ಕೇಳಿಬಂದರೆ ಪ್ರಮಾಣ ಪತ್ರದಲ್ಲಿ ಅವರ ಹೆಸರು ಬರೆದು, ಕ್ಲೀನ್ ಚಿಟ್ ಕೊಡುತ್ತಾರೆ.
 • ಇಲ್ಲಿನ ಜನರಿಗೆ ನೀರಿನ ಅಗತ್ಯವಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಯೋಜನೆಗಳನ್ನು ಕೈಗೊಂಡಿದ್ದರು. ನಾನು ಭರವಸೆ ನೀಡುವೆ ಬಿಜೆಪಿ ಸರ್ಕಾರ ಬಂದಾಗ ಕೇಂದ್ರ ಸರ್ಕಾರವೂ ಯೋಜನೆಗಳನ್ನು ಪೂರ್ಣಗೊಳಿಸಲು ಸಹಕಾರ ನೀಡುತ್ತೇವೆ.
 • ಚಿತ್ರದುರ್ಗದ ಜನರಿಗೆ ಕಾಂಗ್ರೆಸ್ ಸರ್ಕಾರ ಅವಮಾನ ಮಾಡಿದೆ. ಮದಕರಿ ನಾಯಕ, ಓಬವ್ವಳ ಸಾಧನೆಯನ್ನು ಮರೆತು ಜನರಿಗೆ ಅವಮಾನ ಮಾಡಿದೆ.
 • ಚಿತ್ರದುರ್ಗದವರಾದ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಎಸ್.ನಿಜಲಿಂಗಪ್ಪ ಅವರನ್ನು ಪಕ್ಷ ಹೇಗೆ ನಡೆಸಿಕೊಂಡಿತು ಎಂಬುದನ್ನು ಇಂದಿನ ಜನರು ತಿಳಿದುಕೊಳ್ಳಬೇಕು. ದೆಹಲಿಯಲ್ಲಿ ಕುಳಿತ ನಾಯಕರು ನಿಜಲಿಂಗಪ್ಪ ಅವರನ್ನು ಬೆಳೆಯದಂತೆ ನಡೆದರು.
 • ನಿಜಲಿಂಗಪ್ಪ ಅವರ ತಪ್ಪು ಏನು ಗೊತ್ತೆ?. ಅವರು ನೆಹರೂ ಸರ್ಕಾರದ ನೀತಿಯನ್ನು ಟೀಕಿಸಿದರು. ಆರ್ಥಿಕ ನೀತಿ ವಿರೋಧಿಸಿದರು. ಅದಕ್ಕಾಗಿ ಅವರನ್ನು ಕಾಂಗ್ರೆಸ್ ಬೆಳೆಯಲು ಬಿಡಲಿಲ್ಲ.
 • ನಿಜಲಿಂಗಪ್ಪ ಮತ್ತು ಅಂಬೇಡ್ಕರ್ ಅವರು ದಲಿತರ, ಬಡವರ ಪರವಾಗಿ ಕೆಲಸ ಮಾಡುತ್ತಿದ್ದರು, ಅವರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಅವರಿಗೆ ಗೌರವ ಕೊಡಲಿಲ್ಲ.
 • ಕಾಂಗ್ರೆಸ್‌ ಪಕ್ಷದ ವಂಶಪಾರಂಪರ್ಯ ಆಡಳಿತ ನಡೆಸಿದೆ. ದೆಹಲಿಯಲ್ಲಿ ಎಲ್ಲಿ ಹೋದರೂ ಒಂದೇ ಕುಟುಂಬದವರ ಪ್ರತಿಮೆ ಕಾಣುತ್ತದೆ.
 • ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವು ಜಾತಿ, ಧರ್ಮ ನೋಡಲಿಲ್ಲ. ನಾವು ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದೆವು. ಮೋದಿ ಪ್ರಧಾನಿಯಾದಾಗ ಮತ್ತೊಮ್ಮೆ ರಾಷ್ಟ್ರಪತಿ ಅವರನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿತು. ಆಗ ಬಡತನದಲ್ಲಿ ಹುಟ್ಟುಬೆಳೆದ, ದಲಿತರಾದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದೆವು.
 • ಕಾಂಗ್ರೆಸ್‌ ಪಕ್ಷಕ್ಕೆ ಈಗ ದಿಗಿಲು ಉಂಟಾಗಿದೆ. ಅವರ ವೋಟ್ ಬ್ಯಾಂಕ್‌ ಈಗ ಇಲ್ಲ. ದಲಿತರು, ಹಿಂದುಳಿದವರಿಗೆ ಅವರು ಈಗ ಸುಳ್ಳು ಹೇಳಿ ಮತ ಪಡೆಯುವಂತಿಲ್ಲ. * ದಲಿತರ, ಬಡವರ ಕಷ್ಟಗಳು ನನಗೆ ಗೊತ್ತು. ನಾನು ನಿಮ್ಮ ನಡುವಿನಿಂದಲೇ ಬೆಳೆದು ಬಂದವನು. ಆದ್ದರಿಂದ, ನಿಮ್ಮ ಅಭಿವೃದ್ಧಿ ನನ್ನ ಬದ್ಧತೆಯಾಗಿದೆ.

ಬಿಜೆಪಿ ಗೆಲ್ಲಿಸಿ ಕಾಂಗ್ರೆಸ್ ಬದಲಿಸಿ ಎಂಬ ಘೋಷಣೆಯೊಂದಿಗೆ ನಮೋ ಮೋದಿಯವರು ಭಾಷಣವನ್ನು ಮುಗಿಸಿದರು.