ಬೆಂಗಳೂರು : ಅನೇಕ ಮಳಿಗೆಗಳು, ಅಂಗಡಿಗಳು, ಸಂಸ್ಥೆಗಳು ಜನತೆಗೆ ಮಾಸ್ಕ್ ಧರಿಸುವಂತೆ ಒತ್ತಾಯಿಸುತ್ತಿರುವ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಗೊಂದಲಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದೆ.

ಕೊರೊನಾ ಭೀತಿಯಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕಾಗಿಲ್ಲ. ಒಂದು ವೇಳೆ ಸೋಂಕಿನ ಲಕ್ಷಣವಿದ್ದವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು ಎಂದು ಸ್ಪಷ್ಟಪಡಿಸಿದೆ.

ಒಬ್ಬ ವ್ಯಕ್ತಿಯು ಶೀತ ಅಥವಾ ಕೆಮ್ಮು ಅಥವಾ ಜ್ವರ ಅಥವಾ ಇನ್ನಾವುದೇ ಉಸಿರಾಟದ ತೊಂದರೆಯ ಲಕ್ಷಣದಿಂದ ಕೂಡಿದ್ದಲ್ಲಿ ಮಾತ್ರವೇ ಮಾಸ್ಕ್ ಧರಿಸಬೇಕು. ಇದಲ್ಲದೆ ಕೋವಿಡ್-19 ಶಂಕಿತ ಅಥವಾ ದೃಢವಾಗಿರುವ ರೋಗಿಯನ್ನು ನೋಡಿಕೊಳ್ಳುವ ವ್ಯಕ್ತಿಯು ಮಾಸ್ಕ್ ಧರಿಸಬೇಕು , ಉಸಿರಾಟದ ತೊಂದರೆಯ ಲಕ್ಷಣಗಳಿರುವ ರೋಗಿಯ ಪರೀಕ್ಷಿಸಲು ಹಾಜರಾಗುವ ಆರೋಗ್ಯ ಕಾರ್ಯಕರ್ತ ಮಾಸ್ಕ್ ಧರಿಸಬೇಕಿದೆ.

ಕೊರೋನಾ ಶಂಕಿತರು ಅಥವಾ ರೋಗಿಗಳಿಗೆ ಚಿಕಿತ್ಸೆ ನೀಡುವ ಅಥವಾ ಅವರ ಮೇಲ್ವಿಚಾರಣೆ ನಡೆಸುವ ವ್ಯಕ್ತಿಗಳು ಎನ್-95 ಮಾಸ್ಕ್ ಧರಿಸಬೇಕಾಗುತ್ತದೆ. ಉಳಿದವರು ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಧರಿಸಬಹುದು ಎಂದು ಆರೋಗ್ಯ ಇಲಾಖೆ ಆಯುಕ್ತರು ತಿಳಿಸಿದ್ದಾರೆ.!