ಚಿತ್ರದುರ್ಗ: ಕೋವಿಡ್-19 ಸೋಂಕಿನಿಂದ ಗುಣಮುಖರಾದ ನಾಲ್ವರನ್ನು ಮಂಗಳವಾರ ಜಿಲ್ಲಾ ಆಸ್ಪತ್ರೆಯ ಬಳಿಯ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಅಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಹೂಗುಚ್ಛ ನೀಡಿ ಬೀಳ್ಕೊಟ್ಟರು.

ಕೋವಿಡ್ ವೈರಸ್ ಸೋಂಕು ದೃಢಪಟ್ಟಿದ್ದ ಪಿ-2237, ಪಿ-2248, ಪಿ-2253 ಮತ್ತು ಪಿ-2831 ಸೇರಿದಂತೆ ನಾಲ್ವರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದವರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಹೆಚ್.ಜೆ. ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ತುಳಸಿ ರಂಗನಾಥ್, ಡಿವೈಎಸ್‍ಪಿ ಪಾಂಡುರಂಗ ಇನ್ನಿತರರು ಉಪಸ್ಥಿತರಿದ್ದು, ಗುಣಮುಖರಾದ ನಾಲ್ವರಿಗೆ ಹೂಗುಚ್ಛ ನೀಡಿದರು.

   ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲರೂ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಚಳ್ಳಕೆರೆ ಕೋವಿಡ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಕೂಡ ಗುಣಮುಖರಾಗಿದ್ದು, ಬುಧವಾರ ಬಿಡುಗಡೆಯಾಗಲಿದ್ದಾರೆ. ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಹೊರತುಪಡಿಸಿದರೆ ಚಿತ್ರದುರ್ಗ ಜಿಲ್ಲೆಯು ಕೊರೊನಾ ಮುಕ್ತ ಜಿಲ್ಲೆಯತ್ತ ಸಾಗುತ್ತಿದೆ.