ಚೆನ್ನೈ: ತಮಿಳುನಾಡಿನಲ್ಲಿ ಸಾಂಪ್ರಾದಾಯಕ ಹಬ್ಬವನ್ನು ಭರ್ಜರಿಯಾಗಿ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಸಂಕ್ರಾ0ತಿ ಹಬ್ಬವನ್ನೇ ನೆರೆ ರಾಜ್ಯದಲ್ಲಿ ಪೊಂಗಲ್ ಹಬ್ಬವಾಗಿ ಆಚರಿಸಲಾಗುತ್ತದೆ. ಕೊರೊನಾವೈರಸ್ ನಿಬಂಧನೆಗಳ ನಡುವೆ ಮಧುರೈನ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲಾಗಿದೆ.

ಕೊವಿಡ್-19  ಸೋಂಕು ಹರಡುವಿಕೆ ಆತಂಕದ ನಡುವೆ ಅವನಿಯಪುರಂನಲ್ಲಿ ಮಾಸ್ಕ್ ತೊಟ್ಟು ಜಲ್ಲಿಕಟ್ಟು ಸ್ಪರ್ಧೆ ವೀಕ್ಷಿಸುವುದಕ್ಕೆ ನೂರಾರು ಜನರು ಸೇರಿದ್ದಾರೆ. ಕಳೆದ ವರ್ಷ ತಮಿಳುನಾಡು ಸರ್ಕಾರವು ಕೆಲವು ಷರತ್ತುಗಳೊಂದಿಗೆ ಜಲ್ಲಿಕಟ್ಟು ಸ್ಪರ್ಧೆ ನಡೆಸಲು ಅನುಮತಿ ಪಡೆದುಕೊಂಡಿತ್ತು.

ತಮಿಳುನಾಡಿನ ಅವನಿಯಪುರಂನಲ್ಲಿ ಈ ಬಾರಿ ನಡೆಯುತ್ತಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 150 ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಇನ್ನು, ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಇದರ ಶೇ.50 ರಷ್ಟು ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ. ಇದರ ಜೊತೆಗೆ ಜಲ್ಲಿಕಟ್ಟು ಸ್ಪರ್ಧೆಗೆ ತೆರಳುವ ಪ್ರತಿಯೊಬ್ಬರು ಕೊವಿಡ್-19 ನೆಗೆಟಿವ್ ವರದಿಯನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.

ಕಳೆದ 2014 ರಲ್ಲಿ ಜಲ್ಲಿಕಟ್ಟು ಸ್ಪರ್ಧೆ ವಿರುದ್ಧ ಭಾರತೀಯ ಪಶು ಸಂರಕ್ಷಣಾ ಮಂಡಳಿ ಮತ್ತು ಪೇಟಾ ಸಂಸ್ಥೆಗಳು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸುವುದನ್ನು ನಿಷೇಧ ಮಾಡಿ ಎಂದು ಆದೇಶಿಸಿತ್ತು

2017 ರ ಜನವರಿಯಲ್ಲಿ ಚೆನ್ನೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಪರವಾಗಿ ಹೋರಾಟ ತೀವ್ರಗೊಂಡಿತು. ತಮಿಳುನಾಡಿನ ಪೊಂಗಲ್ ಹಬ್ಬದಲ್ಲಿ ಜಲ್ಲಿಕಟ್ಟು ಒಂದು ಸಾಂಪ್ರಾದಾಯಕ ಕ್ರೀಡೆ ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡಿಕೊಂಡ ನಂತರ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸುವುದಕ್ಕೆ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಿತು.