ಬೆಂಗಳೂರು: ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ನೆರವು ಒದಗಿರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದ್ದು, ಉಂಡೆ ಕೊಬ್ಬರಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರ ನಿರ್ಧಾರಿಸಲಾಗಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಕೇಂದ್ರ ಸರ್ಕಾರ ಉಂಡೆ ಕೊಬ್ಬರಿಗೆ ಕ್ವಿಂಟಲ್‌ಗೆ 10,300 ಬೆಂಬಲ ಬೆಲೆ ನಿಗದಿ ಮಾಡಿತ್ತು. ರೈತರಿಗೆ ಇನ್ನೂ ಹೆಚ್ಚಿನ ಬೆಂಬಲ ಬೆಲೆ ಸಿಗಬೇಕು ಎಂಬ ಕಾರಣಕ್ಕೆ, ರೈತರ ಬೇಡಿಕೆ ಮನ್ನಿಸಿ, ಕ್ವಿಂಟಲ್‌ಗೆ 1,000 ನೀಡಲು ತೀರ್ಮಾನಿಸಲಾಯಿತು. ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಇದರಿಂದ ಪ್ರತಿ ರೈತರಿಗೆ ಒಂದು ಕ್ವಿಂಟಲ್‌ಗೆ ₹11,300 ಬೆಂಬಲ ಬೆಲೆ ಸಿಕ್ಕಂತಾಗುತ್ತದೆ ಎಂದು ಅವರು ಹೇಳಿದರು.

ಈ ನಿರ್ಧಾರದಿಂದ ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರಿಗೆ ಪ್ರಯೋಜನವಾಗಲಿದೆ.