ಚಿತ್ರದುರ್ಗ: ಕೋವಿಡ್-19ರ ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಕೈಮಗ್ಗ ನೇಕಾರರಿಗೆ ಆರ್ಥಿಕ ಸಹಾಯ ನೀಡಲು ಸರ್ಕಾರವು ನೇಕಾರ ಸಮ್ಮಾನ್ ಯೋಜನೆ ಘೋಷಣೆ ಮಾಡಿದೆ.

   ನಾಲ್ಕನೇಯ ರಾಷ್ಟ್ರೀಯ ಕೈಮಗ್ಗ ಗಣತಿ ಪಟ್ಟಿಯಲ್ಲಿ ನೋಂದಾಯಿತ ಮತ್ತು ಹಾಲಿ ಕೈಮಗ್ಗ ನೇಯ್ಗೆ ಚಟುವಟಿಕೆಯಲ್ಲಿ ತೊಡಗಿರುವ ಅರ್ಹ ನೇಕಾರರಿಂದ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ನೇಕಾರ ಸಹಕಾರ ಸಂಘಗಳ ಮೂಲಕ ಅರ್ಜಿ ಪಡೆಯಲಾಗುತ್ತಿದೆ.

   ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್‍ನೊಂದಿಗೆ ಮೇಲ್ಕಾಣಿಸಿದ ಸಂಸ್ಥೆಗಳ ಮೂಲಕ ಅಥವಾ ನೇರವಾಗಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಬಿ.ಡಿ.ರಸ್ತೆ, ಯೂನಿಯನ್ ಪಾರ್ಕ್ ಹತ್ತಿರ, ಮಸೀದಿ ಪಕ್ಕ, ಚಿತ್ರದುರ್ಗ ಈ ಕಚೇರಿಗೆ ಜೂನ್ 17ರೊಳಗಾಗಿ ಸಲ್ಲಿಸುವುದು.

   ಗಣತಿ ಪಟ್ಟಿಯಲ್ಲಿ ಇಲ್ಲದವರು, ಹಾಲಿ ಕಾರ್ಯನಿರ್ವಹಿಸುತ್ತಿರುವ ನೇಕಾರರು ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ಅಂತಹವರು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು, ಜೂನ್ 20 ರೊಳಗಾಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್‍ನೊಂದಿಗೆ ಕಚೇರಿಗೆ ಸಲ್ಲಿಸಬೇಕು. ಈ ಅರ್ಜಿಗಳ ವಿವರಗಳನ್ನು ಕರ್ನಾಟಕ ಸರ್ಕಾರದ ಸೇವಾಸಿಂಧು ಪೋರ್ಟ್‍ಲ್‍ನಲ್ಲಿ ಭರ್ತಿ ಮಾಡಿ ನೇರವಾಗಿ ನೇಕಾರರ ಬ್ಯಾಂಕ್ ಖಾತೆಗೆ ರೂ.2000/-ಗಳನ್ನು ವರ್ಗಾವಣೆ ಮಾಡಲಾಗುವುದು.

     ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08194-221426 ಕ್ಕೆ ಅಥವಾ ಖುದ್ದಾಗಿ ಭೇಟಿ ನೀಡಿ ಪಡೆಯಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.