ಈ ಬಾರಿ ವಲಸಿಗರ ವಿರುದ್ಧ ಕೂಗು ಎದ್ದಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರ ಆರಂಭದಿಂದಲೂ ವಲಸಿಗರಿಗೆ ಮಣೆ ಹಾಕುತ್ತಲೇ ಬಂದಿರುವ ಕ್ಷೇತ್ರ. ಚಿತ್ರದುರ್ಗ ಸಂಸದರು ಎಂದಾಕ್ಷಣ ಕೈಗೆ ಸಿಗದವರು ಎಂಬ ಅಭಿಪ್ರಾಯ ಜನನಿತ.

ಇದೇ ಕಾರಣಕ್ಕೆ ಮೊದಲಿನಿಂದಲೂ ಎಲ್ಲಿಂದಲೂ ಏಕಾಏಕಿ ಪಕ್ಷದ ಟಿಕೆಟ್ ಪಡೆದು ಕ್ಷೇತ್ರಕ್ಕೆ ಬಂದು ಗೆದ್ದವರ ಸಂಖ್ಯೆಯೇ ಹೆಚ್ಚು. ಈ ಕಾರಣಕ್ಕೆ ಚಿತ್ರದುರ್ಗಕ್ಕೆ ವಲಸಿಗರ ಲಗ್ಗೆ ಹೆಚ್ಚಾಗುತ್ತಲೇ ಇದೆ. ಪರಿಣಾಮ ಸಂಸದರೊಬ್ಬರಿಂದ ಸಾಮಾನ್ಯ ವ್ಯಕ್ತಿಯೊಬ್ಬರು ಲೀಟರ್‌ ಹೆಡ್‌ ಪಡೆಯಬೇಕೆಂದರೆ ಮಧ್ಯವರ್ತಿಗಳ ಸಂಪರ್ಕ ಅನಿವಾರ್ಯ ಎಂಬ ಪರಿಸ್ಥಿತಿ ಚಿತ್ರದುರ್ಗ ಸಂಸದರ ವಿಷಯದಲ್ಲಿ ದಶಕಗಳಿಂದ ಸೃಷ್ಟಿಯಾಗಿದೆ.

ರಾತ್ರೋರಾತ್ರಿ ಬಂದು ಮದುವೆ-ಮುಂಜಿಗಳಲ್ಲಿ ಪಾಲ್ಗೊಂಡು, ಕೆಲವೆಡೆ ಕಾಮಗಾರಿಗಳಿಗೆ
ಗುದ್ದಲಿ ಹಿಡಿದು ಫೋಟೋಕ್ಕೆ ಫೋಸ್ ಕೊಟ್ಟು ಬೆಂಗಳೂರಿನಲ್ಲೇ ಸಿಗುವಂತ ಎಂಪಿಗಳೇ
ಚಿತ್ರದುರ್ಗ ಕ್ಷೇತ್ರದಲ್ಲಿ ಗೆದ್ದವರು ಹೆಚ್ಚು.
ಇತ್ತೀಚೆಗೆ ವಿಧಾನಪರಿಷತ್, ವಿಧಾನಸಭಾ ಕ್ಷೇತ್ರಕ್ಕೂ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜಿಲ್ಲೆಯ ರಾಜಕಾರಣ ಸಂಪೂರ್ಣವಾಗಿ
ಹೊರ ಜಿಲ್ಲೆಯ ರಾಜಕಾರಣಿಗಳ ಹಿಡಿತಕ್ಕೆ ಹೋಗುವುದು ಖಚಿತ.

ಜತೆಗೆ ಅವರನ್ನು ಹುಡುಕುವುದು, ಅವರಿಂದ ಶಿಫಾರಸು ಪತ್ರ ಪಡೆಯುವುದು ಸಾಮಾನ್ಯ ಜನರಿಗೆ ಕಷ್ಟವಾಗಲಿದೆ.
ಇನ್ನೂ ಸಂಸದರ ಸಹಾಯ ಪಡೆಯಬೇಕು ಎಂದರೆ ಅವರ ಹಿಂಬಾಲಕರನ್ನು ಅಂಗಲಾಚುವುದು ಅನಿವಾರ್ಯ.
ಇದೇ ಕಾರಣಕ್ಕೆ ಎಂಪಿಯೊಬ್ಬರ ಲೇಟರ್‌ಹೆಡ್ ಪಡೆಯಲು ಪರದಾಡುವಂತ ಸ್ಥಿತಿ ಕ್ಷೇತ್ರದಲ್ಲಿ ಮೂರು ದಶಕಗಳಿಂದಲೂ ನಿರ್ಮಾಣವಾಗಿದೆ. ಅನೇಕ ಮಧ್ಯವರ್ತಿಗಳು ಇದನ್ನೇ
ಬಂಡವಾಳ ಮಾಡಿಕೊಂಡು ದುಂಡಾಗಾಗಿದ್ದಾರೆ.

ಈ ಕಾರಣಕ್ಕೆ ಪ್ರಥಮ ಬಾರಿಗೆ ವಲಸಿಗರಿಗೆ ಟಿಕೆಟ್ ನೀಡದಂತೆ ಎಲ್ಲ  ಪಕ್ಷಗಳಲ್ಲೂ ಕೂಗು ಎದ್ದಿದೆ. ಸ್ಥಳೀಯ ವ್ಯಕ್ತಿಗೆ ಎಲ್ಲ ಪಕ್ಷಗಳು ಟಿಕೆಟ್ ಕೊಡಬೇಕೆಂಬ ಒತ್ತಡದ ಧ್ವನಿ ಎಲ್ಲೆಡೆ ಕೇಳಿಬರುತ್ತಿದೆ. ವಲಸಿಗರಿಗೆ ಟಿಕೆಟ್ ನೀಡಿದರೆ ತಕ್ಕ ಪಾಠ ಕಲಿಸಲಾಗುವುದು ಎಂಬ ಎಚ್ಚರಿಕೆ ಸಂದೇಶ ಪಕ್ಷದ ವರಿಷ್ಠರಿಗೆ ಜಿಲ್ಲೆಯಿಂದ ರವಾನೆ ಆಗುತ್ತಿದೆ. ಇದು
ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ.

ಈ ಕಾರಣಕ್ಕೆ ಜಿಲ್ಲೆಯ ಜನರ ಹಿತಾದೃಷ್ಠಿಯಿಂದ ಜನರ ಧ್ವನಿಯಾಗಲು ಬಿಸಿಸುದ್ದಿ.ಡಾಟ್.ಕಾಂ ಮುನ್ನುಡಿ ಇಟ್ಟಿದೆ. ಇಲ್ಲಿ ಜಿಲ್ಲೆಯ ಹಿತಾದೃಷ್ಟಿ ಮುಖ್ಯ. ಹಾಗೆಂದು ಹೊರ ಜಿಲ್ಲೆಯವರೆಲ್ಲರೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿಲ್ಲ
ಎನ್ನುವಂತಿಲ್ಲ. ಕೆಲ ಸಂಸದರು ಸಣ್ಣಪುಟ್ಟ ಕೆಲಸ ಮಾಡಿದ್ದಾರೆ. ಆದರೆ, ಜನರ ನಾಡಿಮಿಡಿತ ಅರಿತು ಜನರ ಕೈಗೆ ಸದಾ ಸಿಗುವಲ್ಲಿ ಮಾತ್ರ ಬಹುತೇಕರು ಸೋತಿದ್ದಾರೆ.
ಇಲ್ಲಿ ಗೆದ್ದಂತಹ ಬಹುತೇಕ ವಲಿಸಗರು ಕೈಗೆ ಸಿಗದವರು ಎಂಬ ಮಾತು ಮಾತ್ರ ಪೂರ್ಣ ಸತ್ಯ.

ಪರಿಣಾಮ ಮಧ್ಯವರ್ತಿಗಳು, ಹಿಂಬಾಲಕರ ಹಾವಳಿ ಜನಸಾಮಾನ್ಯರನ್ನು ಕಂಗೆಡಿಸಿದೆ. ಸಂಸದರು ಎಂದರೆ ಅವರು ಚಿತ್ರದುರ್ಗ ಸಾಮಾನ್ಯ ಜನರ ಮಟ್ಟಿಗೆ ಬಿಳಿ ಆನೆ ಎಂಬಂತೆ ಆಗಿದೆ. ಆದ್ದರಿಂದ ಈ ಬಾರಿ ಎದ್ದಿರುವ ಕೂಗಿಗೆ ಧ್ವನಿಯಾಗಲು ನಿಮ್ಮ ಬಿಸಿಸುದ್ದಿ.ಡಾಟ್.ಕಾಂ.
ಹೆಜ್ಜೆ ಇಟ್ಟಿದೆ. ನಿಮ್ಮಗಳ ಅಭಿಪ್ರಾಯವನ್ನೂ ಕೂಡ ಇಲ್ಲಿ ಮುಕ್ತವಾಗಿ ದಾಖಲಿಸಲು ನೀವುಗಳ ಸ್ವತಂತ್ರರು. ತಮ್ಮ ಭಾವಚಿತ್ರದೊಂದಿಗೆ ತಮ್ಮ ಅನಿಸಿಕೆಯನ್ನು ವಾಟ್ಸ್
ಆ್ಯಪ್ (9916881352)
ಮಾಡಿದರೆ ಸಾಕು.

ಬಸವರಾಜ ಚಳ್ಳಕೆರೆ, ಸಂಪಾದಕ