ಚಿತ್ರದುರ್ಗ: ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವೆಸಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಡೆ ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಶುಕ್ರವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಿರ್ಮಲಾ ಸೀತಾರಾಮನ್ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿತು.

ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿರುವುದನ್ನು ಖಂಡಿಸಿ ಕಳೆದ ೯ ತಿಂಗಳ ಹಿಂದೆ ಕರ್ನಾಟಕ ನವ ನಿರ್ಮಾಣ ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಯನ್ನು ನಡೆಸುವಂತೆ ಒತ್ತಾಯಿಸಿತ್ತು. ಕರ್ನಾಟಕದ ಲೋಕಸಭಾ ಸದಸ್ಯರು ಈ ವಿಚಾರವಾಗಿ ಲೋಕಸಭೆ ಅಧಿವೇಶನದಲ್ಲಿ ಚರ್ಚಿಸಿ ಲಿಖಿತ ಮನವಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ನೀಡಿದಾಗ ಕನ್ನಡ ಸೇರಿದಂತೆ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅನುಮತಿಸುವುದಾಗಿ ಭರವಸೆ ಕೊಟ್ಟಿದ್ದರು. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ ಆಯ್ಕೆ ಸಮಿತಿ ನಿನ್ನೆ ೯೫೩ ಬ್ಯಾಂಕಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿರುವುದರಿಂದ ನಿಜಕ್ಕೂ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ನಿರ್ಮಿಲಾ ಸೀತಾರಾಮನ್ ವಿರುದ್ದ ಕಿಡಿ ಕಾರಿದರು.

ಈಗ ಕರೆದಿರುವ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯನ್ನು ತಡೆ ಹಿಡಿದು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.

ಮಹಿಳಾಧ್ಯಕ್ಷೆ ವೀಣಗೌರಣ್ಣ, ನಗರಾಧ್ಯಕ್ಷ ಎಂ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಶಿವು, ಹನುಮಂತರಾಯ ಚೌಳೂರು, ಅನೀಲ್, ಹರೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.