ಬೆಂಗಳೂರು : ಸುಳ್ಳು ಮಾಹಿತಿ ನೀಡಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯಧನ ಪಡೆದು ವಂಚಿಸಿದ ರೈತರಿಗೆ ಕೇಂದ್ರ ಕೃಷಿ ಸಚಿವಾಲಯ ಬಿಗ್ ಶಾಕ್ ನೀಡಿದ್ದು, ರಾಜ್ಯ ಕೃಷಿ ಇಲಾಖೆಯ ಸಹಾಯಧನ ಹಿಂದಿರಿಗಿಸುವಂತೆ ಫಲಾನುಭವಿ ರೈತರಿಗೆ ನೋಟಿಸ್ ನೀಡಲು ಮುಂದಾಗಿದೆ.

ಆದಾಯ ತೆರಿಗೆ ಪಾವತಿಸುವ ರಾಜ್ಯದ ಸಾವಿರಾರು ರೈತರು ಕೇಂದ್ರ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯಧನ ಪಡೆದಿದ್ದು, ಸಹಾಯಧನ ಹಿಂದಿರಿಗಿಸುವಂತೆ ರೈತರಿಗೆ ನೋಟಿಸ್ ಜಾರಿ ಮಾಡುತ್ತಿದೆ.

ಕೇಂದ್ರ ಕೃಷಿ ಸಚಿವಾಲಯವು ಫಲಾನುಭವಿಗಳ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರ ಪರಿಶೀಲನೆ ನಡೆಸಿದ ವೇಳೆ ರಾಜ್ಯದ ಸುಮಾರು 85 ಸಾವಿರಕ್ಕಿಂತ ಹೆಚ್ಚು ರೈತರು ಆದಾಯ ತೆರಿಗೆ ಪಾವತಿದಾರರಾಗಿರುವ ಸಂಗತಿ ಬೆಳಕಿಗೆ ಬಂದಿದೆ.ಇಂತಹ ರೈತರ ಪಟ್ಟಿಯನ್ನು ಕೃಷಿ ಇಲಾಖೆಗೆ ರವಾನಿಸಿದ್ದು, ಕೃಷಿ ಇಲಾಖೆ ಆಯುಕ್ತರು ಈ ರೈತರಿಂದ ಸಹಾಯಧನ ಹಿಂಪಡೆಯುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಒಂದು ವೇಳೆ ಸಹಾಯಧನ ಹಿಂದಿರುಗಿಸದಿದ್ದರೆ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ತಡೆ ಹಿಡಿಯುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.