ಶಂಕರಘಟ್ಟ: ಬೆಳಗಾಂನ ರಾಣಿಚೆನ್ನಮ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಪಿ.ಕೊಣ್ಣೂರು ಇವರನ್ನು ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿ ಕರ್ನಾಟಕ ರಾಜ್ಯದ ರಾಜ್ಯಪಾಲರು ಆದೇಶಿಸಿದ್ದಾರೆ.

ಸದ್ಯ ಇವರು ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಸರಾಂಗದ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು. ಗೋವಾ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಪಾಲಕರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರಲ್ಲದೆ ಅಮೇರಿಕ, ಚೈನಾ, ಶ್ರೀಲಂಕಾ, ಸಿಂಗಪೂರು, ಹಾಂಕಾಂಗ್, ಮಲೇಶಿಯಾ, ಈಜಿಪ್ಟ್, ಥೈಲ್ಯಾಂಡ್ ಮತ್ತು ದಕ್ಷಿಣ ಕೋರಿಯಾ ಹಲವು ವಿಶ್ವವಿದ್ಯಾನಿಲಯಗಳಿಗೆ ವಿಷಯ ಪರಿಣಿತರಾಗಿ ಭೇಟಿ ನೀಡುತ್ತಿರುತ್ತಾರೆ.
ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಇವರ ಕೊಡುಗೆಯನ್ನು ಪರಿಗಣಿಸಿ ಹಾಗೂ ಶಿಕ್ಷಣ ಕ್ಷೇತ್ರದ ಇವರ ಅಪಾರವಾದ ಅನುಭವದ ಹಿನ್ನಲೆಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಕರ್ನಾಟಕ ರಾಜ್ಯಪಾಲರು ನೇಮಿಸಿದ್ದು, ಇವರ ಸಿಂಡಿಕೇಟ್ ಅವಧಿಯು 2020ರವರೆಗೆ ಇರುತ್ತದೆ.

ಅಭಿನಂದನೆ:
ಸುಪ್ರಸಿದ್ದ ಶಿಕ್ಷಣ ತಜ್ಞರಾದ ಪ್ರೊ.ಪಿ.ವಿ.ಕೊಣ್ಣೂರು ಅವರನ್ನು ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದ್ದಕ್ಕಾಗಿ ಇವರನ್ನು ಶಂಕರಘಟ್ಟದ ದೀನಬಂಧು ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಎಂ.ರಮೇಶ್ ಇವರು ಅಭಿನಂದಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬರೀ ರಾಜಕಾರಣಿಗಳೇ ವಿವಿಗೆ ನೇಮಕವಾಗುತ್ತಿರುವ ಸಂದರ್ಭದಲ್ಲಿ ಇಂತಹ ಒಬ್ಬ ಶಿಕ್ಷಣತಜ್ಞರನ್ನು ರಾಜ್ಯಪಾಲರು ನೇಮಿಸಿದ್ದು ಸ್ತುತ್ಯಾರ್ಹವಾದುದು ಎಂದು  ಹೇಳಿಕೆಯಲ್ಲಿ ತಿಳಿಸಿದ್ದಾರೆ.