ಚಿತ್ರದುರ್ಗ: ಕಟುಕ ರಾಜಕಾರಣಕ್ಕಿಂತ ನಾಡನ್ನು, ಮನಸ್ಸುಗಳನ್ನು ’ಕಟ್ಟು’ವಂಥಹ ರಾಜಕಾರಣ ಇಂದಿನ ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯ ದೇವನೂರು ಮಹಾದೇವ ಪ್ರತಿಪಾದಿಸಿದರು.

ನಗರದ ಕ್ರೀಡಾಸಂಕೀರ್ಣದಲ್ಲಿ ಮಂಗಳವಾರ ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಪ್ರಾರಂಭೋತ್ಸವದಲ್ಲಿ ಆಶಯ ಭಾಷಣ ಮಾಡಿದ ಅವರು, ’ಕಟುಕ ಮತ್ತು ಸರ್ಜನ್ ಇಬ್ಬರೂ ಕತ್ತರಿಸುತ್ತಾರೆ. ಆದರೆ ಕಟುಕ ಜೀವ ಕೊಲ್ಲುತ್ತಾನೆ, ಸರ್ಜನ್ ಜೀವ ಉಳಿಸಲು ಕತ್ತರಿಸುತ್ತಾನೆ. ನಮಗೆ ಇವತ್ತು ಸರ್ಜನ್ ರಾಜಕಾರಣದ ಅನಿವಾರ್ಯತೆಇದೆ.ಅಂಥ ರಾಜಕಾರಣಕ್ಕಾಗಿಯೇ ಸ್ವರಾಜ್ ಇಂಡಿಯಾ ಪಕ್ಷ ಉದಯಿಸಿದೆ’ ಎಂದರು.

ಇಂದಿನ ರಾಜಕಾರಣಿಗಳು ಏನನ್ನು ಉಳಿಸಿಲ್ಲ. ಭೂಮಿ, ಗಾಳಿ, ನೀರು ಯಾವುದನ್ನು ಉಳಿಸಿಲ್ಲ. ಗಣಿಗಾರಿಕೆ ಪ್ರದೇಶವನ್ನು ನೋಡಿದರೆ ಮಾನವ ಶತ್ರುಗಳು ಭೂಮಿಯನ್ನು ಧ್ವಂಸ ಮಾಡಿದಂತೆ ಕಾಣುತ್ತದೆ.ಕುಡಿಯಲು ನೀರು ಇಲ್ಲದೆ ಅಂತರ್ಜಲ ಪಾತಳಕ್ಕೆ ಇಳಿದಿದ್ದು ವಿಷದ ನೀರು ಕುಡಿಯುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಭೂಮಿ ಹಿಟ್ಲರ್‌ನ ಗ್ಯಾಸ್ ಛೇಂಬರ್ ಆಗುವುದರಲ್ಲಿ ಅನುಮಾನವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಇಡೀ ವ್ಯವಸ್ಥೆ ಭ್ರಷ್ಟಗೊಂಡಿದೆ. ಕಟುಕ ರಾಜಕಾರಣಿಗಳು ಜೀವ ತೆಗೆದರೆ ಸರ್ಜನ್ ರಾಜಕಾರಣಿಗಳು ಜೀವ ಉಳಿಸುತ್ತಾರೆ. ಇಂದಿನ ರಾಜಕಾರಣಕ್ಕೆ ಇದು ಬರೆದ ಭಾಷ್ಯ. ಇಂದಿನ ಪರಿಸ್ಥಿತಿಯಲ್ಲಿ ಜೀವ ಉಳಿಸುವ ಸರ್ಜನ್ ರಾಜಕಾರಣಿಗಳು ಅಗತ್ಯವಾಗಿದ್ದಾರೆ. ಇದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ಸರ್ಜನ್ ರಾಜಕಾರಣಿಗಳ ಅನಿವಾರ್ಯತೆ ಇದೆ ಸಮುದಾಯದ ಹಿತಕ್ಕಾಗಿ ರಾಜಕಾರಣ ಮಾಡುತ್ತಿದ್ದ ರಾಜಕಾರಣಿಗಳು ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರೆ ಸ್ವರಾಜ್ ಪಕ್ಷದ ಅಗತ್ಯವಿರಲಿಲ್ಲ. ಅಂದು ಸರ್ಜನ್ ರಾಜಕಾರಣಿಗಳಿದ್ದರು ಇಂದು ಕಟುಕ ರಾಜಕಾರಣಿಗಳಿದ್ದಾರೆ. ಇವರ ನಡವೆ ನಾಡು ಸಿಲುಕಿ ವಿಲವಿಲನೆ ಒದ್ದಾಡುತ್ತಿದೆ. ಸಮುದಾಯದಲ್ಲಿ ಆತಂಕ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ನಂಘ, ಜನಸಂಗ್ರಾಮ, ದಲಿತ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘಟನೆಗಳು ಸಂಘಟಿತರಾದರೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಬಹುದು. ಈ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಆಗದಿದ್ದರೂ ಕೆಲವು ಕಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದರು.
ಅದಾನಿ ಅಂಬಾನಿ ಅಲ್ಲ. ಅಭಿವೃದ್ದಿ ಅಳತೆಗೋಲು ಉದ್ಯೋಗ ಸ್ವಾವಲಂಬಿ ಜೀವನ. ಕೆಲವು ಯುವಕರು ಕೇಸರಿ ಬಾವುಟ ಕಟ್ಟಿಕೊಂಡು ತೆರಳುತ್ತಿದ್ದನ್ನು ಕಂಡೆ.ಇವರು ಬಜರಂಗದಳ ಬಿಜೆಪಿ ಕಾರ್ಯಕರ್ತರು ಇರಬಹುದು. ಇವರುಗಳು ನಾಯಕರಿಗೆ ಉದ್ಯೋಗ ಕೊಡುವಂತೆ ಕೇಳಬೇಕು. ಉದ್ಯೋಗ ಸಿಕ್ಕರೆ ಯುವ ಜನರು ಸನ್ಮಾರ್ಗದಲ್ಲಿ ಸಾಗುತ್ತಾರೆ ಎಂದು ಹೇಳಿದರು.