ಚಿತ್ರದುರ್ಗ,ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಮುಂದಿನ ಜುಲೈ, ಆಗಸ್ಟ್‌ನಲ್ಲಿ ಹೆಚ್ಚು ಮಳೆ ಬರುವುದರಿಂದ ಕೀಟಜನ್ಯ ರೋಗಗಳ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.
ಅವರು (ಜೂ.೮) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಳೆಗಾಲದಲ್ಲಿ ಹೆಚ್ಚಾಗಿ ಕೀಟಗಳಿಂದ ವಿವಿಧ ಸಾಂಕ್ರಾಮಿಕರೋಗಗಳು ಹೆಚ್ಚುವ ಸಂಭವವಿರುತ್ತದೆ. ಇವುಗಳ ನಿಯಂತ್ರಣಕ್ಕೆ ಸ್ವಚ್ಛತೆಯನ್ನು ಎಲ್ಲಾ ಕಡೆ ಕಾಪಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಅಂತರ್ ಇಲಾಖೆಗಳ ಸಮನ್ವಯತೆ ಬಹಳ ಮುಖ್ಯವಾಗಿರುತ್ತದೆ. ಆರೋಗ್ಯ ಇಲಾಖೆಯ ಜೊತೆಗೆ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೀಟಜನ್ಯ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಜೂನ್ ೭ ರ ವರೆಗೆ ೩೩ ಡೆಂಗ್ಯೀ ಪ್ರಕರಣಗಳ ವರದಿಯಾಗಿದ್ದು ಇದರಲ್ಲಿ ಒಬ್ಬರು ಮೃತಪಟ್ಟಿರುವರು. ವರದಿಯಾದ ಪ್ರಕರಣಗಳಲ್ಲಿ ಚಿತ್ರದುರ್ಗ ತಾಲ್ಲೂಕಿನ ೧೪ ರಲ್ಲಿ ೧೧ ಚಿತ್ರದುರ್ಗ ನಗರದಲ್ಲಿ ವರದಿಯಾಗಿವೆ. ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣದಲ್ಲಿದ್ದು ಇಲ್ಲಿಯವರೆಗೆ ೩ ವರದಿಯಾಗಿವೆ. ಕಳೆದ ೨೦೧೪ ರಲ್ಲಿ ೩೭ ವರದಿಯಾಗಿತ್ತು. ೨೦೦೯ ರಿಂದ ಇಲ್ಲಿಯವರೆಗೆ ಮಲೇರಿಯಾ ನಿಯಂತ್ರಣದಲ್ಲಿದ್ದು ಪ್ರಕರಣಗಳು ಬಹುತೇಕ ಕಡಿಮೆಯಾಗುತ್ತಿವೆ. ರಾತ್ರಿ ವೇಳೆ ಕಚ್ಚುವ ಸೊಳ್ಳೆಗಳಿಂದ ಮಲೇರಿಯಾ ಬಂದರೆ, ಹಗಲು ಕಚ್ಚುವ ಹೆಣ್ಣು ಸೊಳ್ಳೆಯಿಂದ ಡೆಂಗ್ಯೀ ಬರುತ್ತದೆ.
ಡೆಂಗ್ಯೀ ಮತ್ತು ಮಲೇರಿಯಾ ನಿಯಂತ್ರಣಕ್ಕೆ ಸ್ವಚ್ಛತೆ ಬಹಳ ಮುಖ್ಯವಾಗಿದ್ದು ನೀರು ನಿಲ್ಲದಂತೆ ಚರಂಡಿ,
ಸ್ವಚ್ಛ ಮಾಡಬೇಕಾಗಿದೆ. ಮತ್ತು ಮಳೆ ಬಂದಾಗ ನೀರು ನಿಂತು ಲಾರ್ವ ಉತ್ಪತ್ತಿಯಾಗಿ ಡೆಂಗ್ಯೀ ಬರುವ ಸಂಭವ ಇರುವುದರಿಂದ ಟೈರ್‌ಗಳು, ತೆಂಗಿನ ಚಿಪ್ಪು, ನೀರಿನ ತೊಟ್ಟಿ, ನರ್ಸರಿ ಸ್ಥಳಗಳು ಇರುವ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮೊದಲ ಸುತ್ತಿನಲ್ಲಿ ಜಿಲ್ಲೆಯಲ್ಲಿನ ೨.೩೮ ಲಕ್ಷ ಮನೆಗಳಲ್ಲಿ ಲಾರ್ವ ಸಮೀಕ್ಷೆ ಕೈಗೊಂಡು ಲಾರ್ವ ನಾಶಪಡಿಸಲು ಅಬೇಟ್ ದ್ರಾವಣ ವಿತರಣೆ ಮಾಡಲಾಗಿದೆ. ಮತ್ತು ಜನರಲ್ಲಿ ಅರಿವು ಮೂಡಿಸಲು ಕರಪತ್ರ, ಗೋಡೆ ಬರಹಗಳ ಮೂಲಕ ಮುನ್ನೆಚ್ಚರಿಕೆ ಕ್ರಮಗಳ ಜಾಗೃತಿ ಮೂಡಿಸಲಾಗುತ್ತದೆ. ನಗರ, ಪಟ್ಟಣ ಪಂಚಾಯಿತಿಗಳಲ್ಲಿ ನಿಯಂತ್ರಣಕ್ಕಾಗಿ ಸ್ವಚ್ಛತೆ ಕಾಪಾಡಿಕೊಳ್ಳಲು ಆಯುಕ್ತರು, ಮುಖ್ಯಾಧಿಕಾರಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮತ್ತು ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಕೃಷಿ ಜಮೀನುಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಇಲಾಖೆ ಮೂಲಕ ರೈತರಲ್ಲಿಯು ಅರಿವು ಮೂಡಿಸಲು ನಿರ್ದೇಶನ ನೀಡಲಾಗಿದೆ.
ಮತ್ತು ರಸ್ತೆ ಬದಿ, ಬೀದಿಬದಿ ಮತ್ತು ಶಾಲೆಯ ಸುತ್ತಮುತ್ತ ಕೊಯ್ದ ಹಣ್ಣುಗಳ ಮಾರಾಟ ಮಾಡಬಾರದು. ಇದರಿಂದ ಸಾಂಕ್ರಾಮಿಕ ರೋಗಗಳು ಬರಬಹುದು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಮತ್ತು ಮಾವಿನ ಹಣ್ಣು ಮಾಗಿಸಲು ರಾಸಾಯನಿಕ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದ್ದು ಅಧಿಕಾರಿಗಳಿಗೆ ಪರಿಶೀಲಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಡಾ; ಜಯಮ್ಮ, ಜಿಲ್ಲಾ ಕಣ್ಗಾವಲು ಘಟಕದ ಡಾ; ರೇಣುಪ್ರಸಾದ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ; ರಂಗನಾಥ್, ತಹಶೀಲ್ದಾರ್ ಕಾಂತರಾಜ್ ಉಪಸ್ಥಿತರಿದ್ದರು.