ಬಳ್ಳಾರಿ: ರಾಜ್ಯದ ಯಾವುದೇ ಭಾಗದಿಂದ ಶುಲ್ಕವಿಲ್ಲದೇ ತಮ್ಮ ದೂರವಾಣಿಯಿಂದ ೧೦೪ಕ್ಕೆ ಉಚಿತ ಕರೆಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹುಬ್ಬಳ್ಳಿಯ ೧೦೪ ಆರೋಗ್ಯವಾಣಿ ಸೇವಾ ಅಭಿವೃದ್ಧಿ ಸಂಸ್ಥೆಯ ಸಾರ್ವಜನಿಕ ಜನ ಸಂಪರ್ಕಧಿಕಾರಿ ಚಾಂದ್ ಬೇಗಂ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿಯ ೧೦೪ ಆರೋಗ್ಯವಾಣಿ ಸೇವಾ ಅಭಿವೃದ್ಧಿ ಸಂಸ್ಥೆಯವರ ಸಂಯುಕ್ತಾಶ್ರದಲ್ಲಿ ಇತ್ತಿಚೆಗೆ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ  ೧೦೪ ಆರೋಗ್ಯವಾಣಿ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯ ಇಲಾಖೆಯಲ್ಲಿಯ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಅನಾರೋಗ್ಯ ಮುಕ್ತ ಸಮಾಜ ನಿರ್ಮಿಸೋಣ. ಇಲ್ಲಿಯವರೆಗೆ ೩೮ ಜನ ಮಾನಸಿಕ ಜೀವವನ್ನು ರಕ್ಷಿಸಲಾಗಿದೆ. ಪ್ರತಿ ದಿನ ಅಂದಾಜು ೧೨೦೦೦ ಕ್ಕೂ ಹೆಚ್ಚು  ಜನರು  ಆರೋಗ್ಯವಾಣಿಗೆ ಕರೆನೀಡಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಿ.ರಮೇಶ್ ಬಾಬು ಅವರು ಮಾತನಾಡಿ, ೧೦೪ ಆರೋಗ್ಯವಾಣಿ ಯೋಜನೆಯು ಪ್ರತಿಯೊಬ್ಬರ, ಪ್ರತಿಯೊಂದು ಮನೆಯ ಮಾತಾಗಬೇಕು. ಇದಕ್ಕೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು ಕ್ಷೇತ್ರ ಆರೋಗ್ಯ ಸಿಬ್ಬಂದಿವರ್ಗದವರು ಹಾಗೂ ಆಶಾ ಸಂಪನ್ಮೂಲ ವ್ಯಕ್ತಿಗಳು ವಿವಿಧ ಸಭೆಗಳಲ್ಲಿ ವ್ಯಾಪಕ ಪ್ರಚಾರ ಮಾಡಿದಾಗ ಮಾತ್ರ ಸಾಧ್ಯ. ಈ ಯೋಜನೆ  ಸದ್ಬಳಿಕೆ ಮಾಡಿಕೊಂಡು ತಾಯಿಮರಣ, ಶಿಶುಮರಣ ಮತ್ತು ಸಾಂಕ್ರಮಿಕ ರೋಗಗಳನ್ನು ನಿಯಂತ್ರಣ ಮಾಡಬಹುದು ಎಂದು ಅವರು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ||ವೆಂಕಟೇಶ ಮೂರ್ತಿ ಮಾತನಾಡಿ, ೧೦೪ ಆರೋಗ್ಯವಾಣಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಸಕಾಲದಲ್ಲಿ ಬಳಿಸಿಕೊಂಡು ಗಂಭೀರವಾದ ಖಾಯಿಲೆಗಳಾದ ಹೆಚ್.ಐ.ವಿ(ಏಡ್ಸ್), ಹೆಪಟೈಟೀಸ್-ಬಿ, ಡೆಂಘಿಜ್ವರ, ಹೆಚ್-೧ ಎನ್-೧ ಹಾಗೂ ಇನ್ನಿತರ ಸಾಂಕ್ರಮಿಕ ರೋಗಗಳ ಸಮಸ್ಯೆಗಳನ್ನು ಪರಿಹರಿಸಿಕೊಂಡು, ಉತ್ತಮ ಆರೋಗ್ಯ ಪಡೆದು ಸುಖೀ ಜೀವನವನ್ನು ನಡೆಸಬಹುದು ಎಂದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಸುರೇಶ್ ಅವರು ಸ್ವಾಗತಿಸಿದರು, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಕೃಷ್ಣ ನಾಯಕ್ ಅವರು ವಂದಿಸಿದರು