ಚಿತ್ರದುರ್ಗ: ಸಾಕ್ಷಿಗಳನ್ನು ಕಾನೂನು ಚೌಕಟ್ಟಿನಲ್ಲಿ ಕಟ್ಟಿಹಾಕಿದಾಗ ಮಾತ್ರ ಅಪರಾಧಿಗಳನ್ನು ಮಟ್ಟ ಹಾಕಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಹೇಳಿದರು.
ದಾವಣಗೆರೆ ಪೂರ್ವವಲಯ ಮತ್ತು ಹುಬ್ಬಳ್ಳಿ-ಧಾರವಾಡ ನಗರದ ಸೇವಾನಿರತ ಮುಖ್ಯಪೇದೆಗಳಿಗೆ ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಆರಂಭಗೊಂಡಿರುವ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಮೋಸ, ವಂಚನೆ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಇವುಗಳು ಯಾವಾಗ ಯಾವ ರೀತಿಯಲ್ಲಿ ಆಗುತ್ತವೆ ಎಂಬುದನ್ನು ನಿರೀಕ್ಷೆ ಮಾಡಲು ಆಗುವುದಿಲ್ಲ. ಹಾಗಾಗಿ ಎಲ್ಲಿ ಏನೆ ಅನಾಹುತಗಳು ನಡೆದಾಗ ಕೂಡಲೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಆರೋಪಿಗಳು ಪೊಲೀಸರಿಗಿಂತಲೂ ಚಾಣಾಕ್ಷಿರುತ್ತಾರೆ. ಅದಕ್ಕಾಗಿ ಎಲ್ಲವನ್ನು ಸಂಶಯದ ದೃಷ್ಟಿಯಿಂದ ನೋಡಿ ವಿಚಾರಣೆಯಲ್ಲಿ ತೊಡಗಿ ಅಗತ್ಯ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಿದಾಗ ಮಾತ್ರ ಅಪರಾಧಿಗಳಿಗೆ ಶಿಕ್ಷೆ ನೀಡಬಹುದು. ಇಲ್ಲವಾದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ ಎಂದು ಹೇಳಿದರು.
ಜ್ಞಾನವನ್ನು ಹೆಚ್ಚಿಸಿಕೊಂಡು ಕೆಲಸ ಮಾಡದಿದ್ದರೆ ಸಮಾಜದಲ್ಲಿ ಮೋಸ ವಂಚನೆಗೆ ಬಲಿಯಾಗಬೇಕಾತ್ತದೆ. ಇಲ್ಲವಾದಲ್ಲಿ ಯಾಮಾರಿಸುವವರು ಇದ್ದೇ ಇರುತ್ತಾರೆ. ಭಾರತದಲ್ಲಿ ಎಷ್ಟೊಂದು ಅನ್ಯಾಯ, ಮೋಸ, ವಂಚನೆ ನಡೆಯುತ್ತದೆ ಎಂದು ಹಿಂದೆಯೇ ಇಂಗ್ಲೆಂಡಿನವರಿಗೆ ತಿಳಿದಿತ್ತು. ಹಾಗಾಗಿ ಬ್ರಿಟೀಷ್‌ನವರು ನಮ್ಮ ದೇಶದಲ್ಲಿ ಬಿಟ್ಟುಹೋಗಿರುವ ಐ.ಪಿ.ಸಿ.ಹಿಡಿದುಕೊಂಡು ಹೋಗುತ್ತಿದ್ದೇವೆ. ಸಮಾಜವನ್ನು ಕಾಯುವ ನಿಮ್ಮ ಮೇಲೆ ಸಾರ್ವಜನಿಕರು ಇಟ್ಟುಕೊಂಡಿರುವ ಗೌರವ ನಂಬಿಕೆಗೆ ಧಕ್ಕೆ ಬಾರದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ನಿಮ್ಮ ಮೈಮೇಲೆ ಇರುವ ಸಮವಸ್ತ್ರಕ್ಕೆ ಸಿಗುವ ಗೌರವ ಬೇರೆ ಯಾರಿಗೂ ಇಲ್ಲ. ಇದೊಂದು ಪವಿತ್ರವಾದ ಕೆಲಸ ಎಂದು ಭಾವಿಸಿ. ಯಾವುದೇ ಸಂದರ್ಭಗಳಲ್ಲಿ ನೊಂದು ನ್ಯಾಯ ಬಯಸಿ ಪೊಲೀಸ್ ಠಾಣೆಗೆ ಬರುವವರ ಬಳಿ ಕೆಟ್ಟದಾಗಿ ವರ್ತಿಸಬೇಡಿ. ಸೌಜನ್ಯದಿಂದ ಕಷ್ಟಗಳನ್ನು ಆಲಿಸಿ ಸಾಧ್ಯವಾದಷ್ಟು ನ್ಯಾಯ ಕೊಡುವ ಕೆಲಸ ಮಾಡಿ ಎಂದು ಮುಖ್ಯಪೇದೆಗಳಿಗೆ ನ್ಯಾಯಾಧೀಶರು ಕಿವಿಮಾತು ಹೇಳಿದರು.
ಸಮವಸ್ತ್ರದಲ್ಲಿದ್ದಾಗ ದುಶ್ಚಟಗಳಿಗೆ ಬಲಿಯಾಗಬೇಡಿ. ಸಮಾಜ ನಿಮ್ಮನ್ನು ಸಂಶಯದಿಂದ ನೋಡುವ ರೀತಿಯಲ್ಲಿ ನಿಮ್ಮ ವರ್ತನೆ ಇರಬಾರದು. ಇದರಿಂದ ನಿಮ್ಮ ವೃತ್ತಿಗೆ ಗೌರವ ಸಿಗುವುದಿಲ್ಲ. ಎಲ್ಲಿಯೇ ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆ ನಡೆದಾಗ ತಡ ಮಾಡದೆ ಸ್ಥಳಕ್ಕೆ ಹೋಗಿ ವಿಚಾರಣೆ ನಡೆಸಿ ಒಳ್ಳೆಯದು ಕೆಟ್ಟದ್ದು ಯಾವುದು ಎಂದು ತೀರ್ಮಾನಿಸಿ ಅಮಾಯಕರಿಗೆ ನ್ಯಾಯ ದೊರಕಿಸಿ ಸಮಾಜ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಿ ಎಂದರು.
ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರು ಹಾಗೂ ಎಸ್ಪಿ ಪಿ.ಪಾಪಣ್ಣ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಡಿ.ವೈ.ಎಸ್ಪಿ ರುದ್ರಮುನಿ, ಸತೀಶ್ ವೇದಿಕೆಯಲ್ಲಿದ್ದರು. ಕ್ರಿಮಿನಾಲಜಿ ಪ್ರೊ.ನಟರಾಜ್, ಆಕಾಶವಾಣಿಯ ಪ್ರದೀಪ್‌ಕುಮಾರ್, ಇನ್ಸ್‌ಪೆಕ್ಟರ್ ವರದರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.