ಚಿತ್ರದುರ್ಗ: ಹಣ ನೀಡಿ ಕಮೀಷನ್ ಪಡೆಯುವ ಕಾಂಗ್ರೆಸ್ ಬಗ್ಗೆ ನಾನು ಪ್ರಚಾರಕ್ಕೆ ಹೋದ ಕಡೆಗೆಲ್ಲಾ ಜನರ ಅಸಮಾಧಾನ, ಆಕ್ರೋಶವಿದೆ ಎಂದು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.
ಹೂವಿನಹಡಗಲಿ, ಕುಷ್ಠಗಿಯಲ್ಲಿ ಪ್ರಚಾರ ಮುಗಿಸಿಕೊಂಡು ತುರುವನೂರಿಗೆ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಹೆಲಿಕ್ಯಾಪ್ಟರ್‌ನಲ್ಲಿ ಶನಿವಾರ ಚಿತ್ರದುರ್ಗಕ್ಕೆ ಆಗಮಿಸಿದ ಅವರು ವಿಜ್ಞಾನ ಕಾಲೇಜು ಮೈದಾನದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತ ರಾಜ್ಯದ ಮುಖ್ಯಮಂತ್ರಿ ಮನಸ್ಸು ಮಾಡಿದ್ದರೆ ಉತ್ತರ ಕರ್ನಾಟಕ ಸಮಗ್ರ ನೀರಾವರಿಯಾಗುತ್ತಿತ್ತು. ಆದರೆ ಅದ್ಯಾವುದಕ್ಕೂ ಗಮನ ಕೊಡದೆ ಐದು ವರ್ಷಗಳ ಕಾಲಹರಣ ಮಾಡಿ ಕಮೀಷನ್ ಪಡೆಯುವುದನ್ನೇ ದಂದೆಯನ್ನಾಗಿಸಿಕೊಂಡರು ಎಂದು ಆ ಭಾಗದ ಜನ ಆವೇಶಭರಿತರಾಗಿ ಮಾತನಾಡುತ್ತಿರುವುದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದು ಬೀಗಿದರು.
ನೀರಾವರಿ ಮಾಡುವುದಾಗಿ ಕೂಡಲ ಸಂಗಮದಲ್ಲಿ ಆಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧಕ್ಕೆ ಹೋದ ಮೇಲೆ ಎಲ್ಲವನ್ನು ಮರೆತುಬಿಡುತ್ತಾರೆ. ಚಿತ್ರದುರ್ಗ ಜಿಲ್ಲೆಗೆ ಇಷ್ಟೊತ್ತಿಗೆ ಯಾವಾಗಲೋ ಭದ್ರಾಮೇಲ್ದಂಡೆ ಯೋಜನೆ ಆಗಬೇಕಿತ್ತು. ಕೊಟ್ಟ ಮಾತಿನಂತೆ ಪ್ರತಿ ವರ್ಷ ಇಂತಿಷ್ಠು ಹಣ ಬಿಡುಗಡೆ ಮಾಡದ ಕಾರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಬಿಜೆಪಿ.ಯನ್ನು ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಕ್ಕೆ ತಂದು ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಕೇಂದ್ರದಿಂದ ಒಂದು ಲಕ್ಷ ಕೋಟಿ ರೂ.ಗಳನ್ನು ತಂದು ಸಮಗ್ರ ನೀರಾವರಿಯನ್ನಾಗಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಗಾಲಿ ಜನಾರ್ಧನರೆಡ್ಡಿ ಬಿಜೆಪಿಯಿಂದ ಅಧಿಕೃತವಾಗಿ ನನ್ನ ಪರ ಪ್ರಚಾರ ಮಾಡುತ್ತಿಲ್ಲ ನಿಜ. ಆದರೆ ಹಿಂದಿನಿಂದಲೂ ನನಗೆ ಆಪ್ತಮಿತ್ರನಾಗಿರುವುದರಿಂದ ಈ ಚುನಾವಣೆಯಲ್ಲಿ ನನ್ನ ಪರ ಪ್ರಚಾರಕ್ಕೆ ಬಂದಿದ್ದಾರೆ ಅದರಲ್ಲಿ ತಪ್ಪೇನು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ಚಳ್ಳಕೆರೆ ಬಿಜೆಪಿ ಅಭ್ಯರ್ಥಿ ಕುಮಾರಸ್ವಾಮಿ, ನಗರಸಭೆ ಸದಸ್ಯೆ ಶ್ಯಾಮಲಶಿವಪ್ರಕಾಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ವಕ್ತಾರ ನಾಗರಾಜ್‌ಬೇದ್ರೆ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.