ಹೈದರಾಬಾದ್ : ಆಕೆ ೧೨ನೇ ತರಗತಿಯಲ್ಲಿ ರಾಜ್ಯಕ್ಕೆ ಟಾಫರ್. ಇದೇ ಕಾರಣದಿಂದಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಇನ್ ಸ್ಟೈರ್ ವಿದ್ಯಾರ್ಥಿ ವೇತನಕ್ಕೂ ಆಕೆ ಆಯ್ಕೆಯಾಗಿದ್ದಳು. ದೆಹಲಿಯ ಶ್ರೀರಾಮ್ ಮಹಿಳಾ ಕಾಲೇಜಿನಲ್ಲಿ ಬಿಎಸ್ಸಿ ಗಣಿತ ಕೋರ್ಸ್ ಗೆ ಉಚಿತ ಪ್ರವೇಶ ಕೂಡ ಪಡೆದಿದ್ದಳು. ಆದ್ರೇ.. ಲಾಕ್ ಡೌನ್ ನಿಂದಾಗಿ ತಂದ ಸಂಕಷ್ಟದಿಂದ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ತಂದೆ-ತಾಯಿಗಳ ಕಷ್ಟ ಕಂಡು, ಮನನೊಂದು, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದ್ರೇ.. ಆಕೆ ಡೆತ್ ನೋಟ್ ನಲ್ಲಿ ಬರೆದ ಕರುಣಾಜನಕ ಕತೆ ಮನಮಿಡಿಯುತ್ತಿದೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಐಶ್ವರ್ಯ ರೆಡ್ಡಿ, ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದಂತ ಯುವತಿ. ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ರ್ಯಾಂಕ್ ಪಡೆದು, ಕೀರ್ತಿ ತಂದಿದ್ದಂತ ಯುವತಿ. ಪಿಯುಸಿಯಲ್ಲಿ ತೆಗೆದಿದ್ದಂತ ಹೆಚ್ಚಿನ ಅಂಕಗಳ ಆಧಾರ ಮೇಲೆ ದೆಹಲಿಯ ಶ್ರೀರಾಮ್ ಮಹಿಳಾ ಕಾಲೇಜಿಗೂ ಬಿಎಸ್ಸಿ ಮ್ಯಾಥಮೆಟಿಕ್ಸ್ ಓದೋದಕ್ಕೆ ಸೀಟು ಸಿಕ್ಕಿತ್ತು. ಕಾಲೇಜಿಗೂ ತೆರಳಿ, ಬಿಎಸ್ಸಿಗೆ ಅಡ್ಮಿಷನ್ ಆಗಿ, ಕಲಿಕೆಯನ್ನು ಮುಂದುವರೆಸಿದ್ದಳು.

ಪಿಯುಸಿಯಲ್ಲಿ ಗಳಿಸಿದಂತ ಉತ್ತಮ ಅಂಕಗಳಿಂದಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಇನ್ ಸ್ಟೈರ್ ವಿದ್ಯಾರ್ಥಿ ವೇತನ ಕೂಡ ಆಕೆಗೆ ಸಿಕ್ಕಿತ್ತು. ಇದರಿಂದಲೇ ದೆಹಲಿಯ ಶ್ರೀರಾಮ್ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿದ್ದಳು. ಐಎಎಸ್ ಅಧಿಕಾರಿಯಾಗಬೇಕು ಎಂಬ ಆಸೆಯೊಂದಿಗೆ ವಿದ್ಯಾಭ್ಯಾಸ ಮುಂದುವರೆಸಿದ್ದಳು. ಆದ್ರೇ ಕೊರೋನಾ ಸಂಕಷ್ಟದಿಂದಾಗಿ ಲಾಕ್ ಡೌನ್ ಆಗಿದ್ದರಿಂದ ಕಾಲೇಜು ಮುಚ್ಚಲ್ಪಟ್ಟು ಊರಿಗೆ ತೆರಳುವಂತಾಗಿತ್ತು.
ತನ್ನ ಹುಟ್ಟೂರಿಗೆ ಬಂದಂತ ಐಶ್ವರ್ಯಾ ರೆಡ್ಡಿಗೆ ಆಟೋ ಮೆಕಾನಿಕಲ್ ಆಗಿರುವಂತ ಅಪ್ಪ, ಟೈಲರಿಂಗ್ ಕೆಲಸ ಮಾಡುತ್ತಿರುವ ತಾಯಿಯ ಕಷ್ಟ ಕಂಡು ಮರುಗಿದ್ದಳು. ಇದೇ ಸಂದರ್ಭದಲ್ಲಿ ಕಾಲೇಜಿನಿಂದ ಆನ್ ಲೈನ್ ತರಗತಿ ಶುರುವಾದ ಮೇಲೆ, ಮೊಬೈಲ್ ನಲ್ಲಿಯೇ ತರಗತಿಗೆ ಹಾಜರಾಗುತ್ತಿದ್ದಳು. ಆದ್ರೇ ತರಗತಿಗೆ ಹಾಜರಾಗಲು ಲ್ಯಾಪ್ ಟಾಪ್ ಅವಶ್ಯಕತೆ ಇದ್ದ ಕಾರಣ, ತಂದೆ-ತಾಯಿಗಳನ್ನು ಕೇಳಲಾಗದೇ, ನಟ ಸೋನು ಸೂದ್ ಅವರಿಗೆ ಮೇಲ್ ಮಾಡಿ ಕಷ್ಟವನ್ನು ಹೇಳಿಕೊಂಡು ಲ್ಯಾಪ್ ಟಾಪ್ ಗೆ ಮನವಿ ಮಾಡಿದ್ದಳು.

ಆದ್ರೇ.. ಯಾರೂ ಆಕೆಯ ಸಂಕಷ್ಟಕ್ಕೆ ನೆರವಾಗಲಿಲ್ಲ. ಇದರ ಮಧ್ಯೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನೀಡುತ್ತಿದ್ದಂತ ಇನ್ ಸ್ಟೈರ್ ವಿದ್ಯಾರ್ಥಿ ವೇತನ ಕೂಡ ಸ್ಥಗಿತಗೊಂಡಿತ್ತು. ಹಲವು ಬಾರಿ ತಮಗೆ ಲ್ಯಾಪ್ ಟಾಪ್ ಗಾಗಿ ಹಣದ ಅವಶ್ಯಕತೆ ಇದೆ. ವಿದ್ಯಾರ್ಥಿ ವೇತನ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದರೂ, ಪ್ರಯತ್ನ ಫಲಿಸಲಿಲ್ಲ.

ಇದರ ಮಧ್ಯೆ ದೆಹಲಿಯ ಶ್ರೀರಾಮ್ ಮಹಿಳಾ ಕಾಲೇಜು ಸದ್ಯಕ್ಕೆ ಕಾಲೇಜು ಆರಂಭಿಸೋದು ಅನುಮಾನವಿರುವುದರಿಂದ, ಹಾಸ್ಟೆಲ್ ಖಾಲಿ ಮಾಡಿ, ಲಗೇಜ್ ತೆಗೆದುಕೊಂಡು ಹೋಗುವಂತೆ ಸೂಚಿಸಿತ್ತು. ಅಲ್ಲಿಗೆ ಹೋಗಿ ರೂಂ ಖಾಲಿ ಮಾಡಿಕೊಂಡು ಬರದಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಐಶ್ವರ್ಯ, ನನ್ನ ಸಾವಿಗೆ ನಾನೇ ಕಾರಣ. ಯಾರೂ ಕಾರಣರಲ್ಲ. ನನಗೆ ಓದಬೇಕಿದೆ. ಓದದೆ ನಾನು ಬದುಕಲಾರೆ. ಆದ್ರೇ ಓದಿಗಾಗಿ ಲ್ಯಾಪ್ ಟಾಪ್ ಇಲ್ಲದಿರುವುದರಿಂದ, ಓದೋದಕ್ಕೆ ಆಗ್ತಾ ಇಲ್ಲ. ಇದರಿಂದಾಗಿ ತಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಮೂಲಕ ಐಎಎಸ್ ಆಗುವಂತ ಕನಸು ಕಾಣುತ್ತಿದ್ದವಳೇ, ತನ್ನ ಪ್ರಾಣವನ್ನು ಕೊನೆಗಾಣಿಸಿಕೊಂಡಿದ್ದು ನಿಜಕ್ಕೂ ದುರಂತವೇ ಸರಿ.