ನವದೆಹಲಿ: ಎರಡು ಕ್ಷೇತ್ರಗಳಲ್ಲಿ ಒಬ್ಬನೇ ಅಭ್ಯರ್ಥಿ ಸ್ಪರ್ಧಿಸಲು ಚುನಾವಣೆ ಆಯೋಗ ನಿಷೇಧಕ್ಕೆ ಒಲವು ತೋರಿದೆ.

ಈ ಹಿಂದೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಒಂದು ಕ್ಷೇತ್ರದಲ್ಲಿ ಮಾತ್ರವೇ ಕಣಕ್ಕಿಳಿಯಬೇಕು ಎಂಬ ಬೇಡಿಕೆಗೆ ಬೆಂಬಲ ಸೂಚಿಸಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.

ಈ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಇನ್ನೂ ತನ್ನ ಅಭಿಪ್ರಾಯ ಸಲ್ಲಿಸದೇ ಇರುವ ಕಾರಣ, ಅಭಿಪ್ರಾಯ ಸಲ್ಲಿಕೆಗೆ ಕಡೆಯ ಅವಕಾಶ ನೀಡಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಜೊತೆಗೆ ಪ್ರಕರಣವನ್ನು 6 ವಾರಗಳ ಕಾಲ ಮುಂದೂಡಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಜ್ಜಾಗಿರುವಾಗಲೇ ಆಯೋಗ ತನ್ನ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಪ್ರಕರಣದ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಆರು ವಾರಗಳ ಕಾಲ ಮುಂದೂಡಿರುವುದರಿಂದ, ಕುಮಾರಸ್ವಾಮಿ ಸ್ಪರ್ಧೆಗೆ ಯಾವುದೇ ತೊಂದರೆಯಾಗುವುದು ಅನುಮಾನ.

ಯಾವುದೇ ವ್ಯಕ್ತಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಕ್ಕೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 33(7) ಅವಕಾಶ ಮಾಡಿಕೊಡುತ್ತದೆ. ಎರಡು ಕಡೆ ಸ್ಪರ್ಧೆ ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ ಎಂದು ಆಯೋಗ ಪ್ರತಿಪಾದಿಸುತ್ತಿದೆ. ಇಂಥದ್ದೊಂದು ಸುಧಾರಣೆ ಬಗ್ಗೆ 2004ರಲ್ಲೇ ಆಯೋಗ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿತ್ತು. ಆದರೆ 1998ರಲ್ಲಿ ಈ ಪ್ರಸ್ತಾವವನ್ನು ಸಂಸತ್ತಿನ ಸ್ಥಾಯಿ ಸಮಿತಿ ತಿರಸ್ಕರಿಸಿತ್ತು.

ಏಕೆಂದರೆ ಒಬ್ಬ ವ್ಯಕ್ತಿ  2 ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೆ, ಒಂದಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಉಪಚುನಾವಣೆ ನಡೆಸಲು ಅನಗತ್ಯ ವೆಚ್ಚವಾಗುತ್ತದೆ. ಮತದಾರರಿಗೂ ಅನ್ಯಾಯವಾಗುತ್ತದೆ ಎಂದು ವಕೀಲರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನೋಟಿಸ್‌ ನೀಡಿತ್ತು. ಈ ಬಗ್ಗೆ ಆಯೋಗ ತನ್ನ ಅಭಿಪ್ರಾಯ ಸಲ್ಲಿಸಿದೆ. ಅಭಿಪ್ರಾಯ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಅಂತಿಮ ಅವಕಾಶ ನೀಡಿದೆ.

ಒಬ್ಬ ವ್ಯಕ್ತಿ ಎರಡುಕಡೆ ಸ್ಪರ್ಧಿಸಲು ಅವಕಾಶಕ್ಕೆ ಕಡಿವಾಣ ಬಿದ್ದರೆ ಒಳ್ಳೆಯದು ಎಂಬುದು ಜನರ ಅಭಿಪ್ರಾಯ.!