ಚಿತ್ರದುರ್ಗ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್-ಜೆಡಿಎಸ್.ಅಧಿಕಾರಕ್ಕಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಸರ್ಕಾರ ಕಳೆದುಕೊಂಡರೆ ರಾಜ್ಯದ ಜನ ಗೇಲಿ ಮಾಡುತ್ತಾರೆ. ಮತ್ತೆ ಎಂದಿಗೂ ನಂಬುವುದಿಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯರಾದ ಬಸವರಾಜ್ ಹೊರಟ್ಟಿ ಹೇಳಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಲಿಷ್ಠಕರ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಬಿಜೆಪಿ.ಕಿತ್ತಾಡಿದರೆ ಜನ ನಗುತ್ತಾರೆ. ಎರಡು ಪಕ್ಷಗಳ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರ ಸೂಚನೆಯನ್ನು ಎಲ್ಲರೂ ಗೌರವಿಸಬೇಕು. ಮುಖ್ಯಮಂತ್ರಿ ಯಾವುದೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಎಲ್ಲರೂ ಸಹಕರಿಸಿದಾಗ ಮಾತ್ರ ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಅಧಿಕಾರದಲ್ಲಿರುತ್ತದೆ ಎಂದು ತಿಳಿಸಿದರು.
ರಾಜಕೀಯದಲ್ಲಿ ಅಸಮಾಧಾನ, ಸಮಾಧಾನ ಸಹಜ. ಬಿ.ಎಸ್.ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಹದಿನೈದು ದಿನಗಳ ಕಾಲಾವಕಾಶ ಕೊಟ್ಟರು. ಅದೇ ರೀತಿ ಸಮ್ಮಿಶ್ರ ಸರ್ಕಾರ ಎರಡು ಕಡೆಯವರಿಗೆ ತಾರತಮ್ಯವಿಲ್ಲದೆ ಖಾತೆಗಳನ್ನು ಹಂಚಲು ಸಮಯ ಬೇಕಾಗುತ್ತದೆ. ಸಮಸ್ಯೆ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕಾಗಿದೆ ಎಂದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ರಾಜ್ಯದ ಜನರಿಗೆ ನೀಡಿರುವ ಭರವಸೆಯನ್ನು ಉಳಿಸಿಕೊಳ್ಳಬೇಕಾಗಿದೆ. ಅವರಲ್ಲಿರುವಂತ ಕಾಳಜಿ, ಹೊಂದಾಣಿಕೆ, ಸಮಾಧಾನ ಬೇರೆ ಯಾರಲ್ಲಿಯೂ ಇಲ್ಲ. ಜೂ.೮ ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್.ಅಭ್ಯರ್ಥಿ ರಮೇಶ್‌ಬಾಬುರವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಗೆಲ್ಲಿಸಿ ಎಂದು ಬಸವರಾಜ್‌ಹೊರಟ್ಟಿ ಶಿಕ್ಷಕರುಗಳಲ್ಲಿ ವಿನಂತಿಸಿದರು.
ಶಿಕ್ಷಕರುಗಳು ನಮ್ಮ ಪರವಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರದಲ್ಲಿದ್ದಾಗ ಶಿಕ್ಷಕರುಗಳ ಸಮಸ್ಯೆಗಳು ಪರಿಹಾರವಾಗಿಲ್ಲ. ಶಿಕ್ಷಕರುಗಳ ನೇಮಕಾತಿ ಆಗಿಲ್ಲ. ಖಾಸಗಿ ಶಾಲೆಗಳಲ್ಲಿ ಶಿಕ್ಷಕರುಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ಕೊಡಲಿಲ್ಲ. ಪ್ರಜ್ಞಾವಂತ ಶಿಕ್ಷಕರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಶಿಕ್ಷಕರ ಪರವಾಗಿರುವ ರಮೇಶ್‌ಬಾಬುರವನ್ನು ಗೆಲ್ಲಿಸಿ ಎಂದು ಕೋರಿದರು