ಚಿತ್ರದುರ್ಗ: ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ನೌಕರರು ಹಾಗೂ ಅಧಿಕಾರಿಗಳು ಹಿಂಬಡ್ತಿಯ ಆತಂಕದಿಂದ ಶಾಶ್ವತವಾಗಿ ದೂರವಿರಬೇಕಾದರೆ ಕೇಂದ್ರ ಸರ್ಕಾರ ಸಾಂವಿಧಾನಿಕ ತಿದ್ದುಪಡಿ ಮಾಡುವಂತೆ ಕರ್ನಾಟಕ ರಾಜ್ಯ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದರಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ೩೮೦೦ ನೌಕರರು ಹಾಗೂ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಆದರೂ ಎಸ್.ಸಿ., ಎಸ್.ಟಿ.ನೌಕರರಿಗೆ ಸರ್ಕಾರದಿಂದ ಸವಲತ್ತುಗಳನ್ನು ಕೊಡಬೇಕಾದರೆ ಏನಾದರೂ ಒಂದು ತಪ್ಪುಗಳನ್ನು ಹುಡುಕುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಪರಿಶಿಷ್ಠ ಜಾತಿ ಮತ್ತು ವರ್ಗದ ನೌಕರರು ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರುವಂತ ಪರಿಸ್ಥಿತಿ ನಿ೧೪iಣವಾಗಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ನಾವೆ ಕಬಳಿಸುತ್ತಿದ್ದೇವೇನೋ ಎನ್ನುವ ರೀತಿಯಲ್ಲಿ ಮೇಲ್ವರ್ಗದವರು ನಮ್ಮನ್ನು ಕೆಂಗಣ್ಣಿನಿಂದ ನೋಡುತ್ತಿರುವುದು ನಮಗೆ ಅತೀವ ನೋವುಂಟು ಮಾಡಿದೆ ಎಂದು ದುಃಖ ತೋಡಿಕೊಂಡರು.
ಬಡ್ತಿ ಮೀಸಲು ಪ್ರಕರಣದಿಂದ ಹಿಂಬಡ್ತಿ ಪಡೆದಿರುವ ಪರಿಶಿಷ್ಠ ಜಾತಿ ಮತ್ತು ವರ್ಗದ ಹಿತ ಕಾಯುವ ಉದ್ದೇಶವಿರುದ ರಾಜ್ಯ ಸರ್ಕಾರದ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಹಿರೇಹಳ್ಳಿ ಮಲ್ಲಿಕಾರ್ಜುನ್‌ರವರು ರಾಜ್ಯದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭ ಇವರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಕೆ.ಕಮಾನಿ ಮಾತನಾಡಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಹಿಂಬಡ್ತಿ ಹೊಂದಿದ್ದ ರಾಜ್ಯದ ೩೮೦೦ ಪರಿಶಿಷ್ಠ ಜಾತಿ ವರ್ಗದ ನೌಕರರಿಗೆ, ಅಧಿಕಾರಿಗಳಿಗೆ ತಕ್ಷಣವೇ ಮೊದಲಿದ್ದ ಹುದ್ದೆಗಳಿಗೆ ನೇಮಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಸರ್ಕಾರದ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದು ನಮ್ಮ ನಿರಂತರ ಹೋರಾಟಕ್ಕೆ ಸಿಕ್ಕಿರುವ ನ್ಯಾಯ ಎಂದರು.
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್, ಎಂ.ರೇವಣಸಿದ್ದಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.