ಚಿತ್ರದುರ್ಗ:  ನಗರದ ಎಸ್.ಆರ್.ಎಸ್. ಸಮೂಹ ಸಂಸ್ಥೆಗಳ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ ಎಸ್.ಆರ್.ಎಸ್. ಯುವ ತರಂಗ ಸಾಂಸ್ಕೃತಿಕ ಮಹಾಮೇಳ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ನಗಾರಿ ಭಾರಿಸುವುದರ ಮೂಲಕ ಉದ್ಘಾಟನೆ ಮಾಡಿದ ಚಿತ್ರದುರ್ಗ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಯುತ ಶ್ರೀನಾಥ ಎಂ. ಜೋಷಿ ಕಾರ್ಯಕ್ರಮವನ್ನು ಕುರಿತು ಮಾತನಾಡಿ, ಶ್ರೀಯುತರು ಸುಭದ್ರ ಭಾರತದ ನಿರ್ಮಾಣಕ್ಕೆ ಬೇಕಾಗಿರುವ ಬಹುದೊಡ್ಡ ಸಂಪತ್ತು ಯುವ ಜನಾಂಗ. ಏಕೆಂದರೆ ಸ್ವಾಮಿ ವಿವೇಕಾನಂದರು ಹಿಂದೆ ಹೇಳಿದರು ಭವ್ಯ ಭಾರತವನ್ನು ನಿರ್ಮಾಣ ಮಾಡಲು ನೂರು ಜನ ಯುವಕರು ಸಾಕು ಎಂದು ಹೇಳಿದ್ದರು.   ಆದರೆ ಪ್ರಸ್ತುತ ದಿನಗಳಲ್ಲಿ ೫೫ ಕೋಟಿ ಯುವಕರಿದ್ದರೂ ಸಾಧ್ಯವಾಗುತ್ತಿಲ್ಲ ಎಂಬುದು ನೋವಿನ ಸಂಗತಿ.  ಪ್ರೀತಿಯ ಯುವಕರೇ, ಅಂತರ್‌ಜಾಲದಲ್ಲಿ ಬರುವ ನಕಾರಾತ್ಮಕ ವಿಷಯಗಳ ಬಗ್ಗೆ ಗಮನಕೊಡಬೇಡಿ ಎಂದರು.

ಐತಿಹಾಸಿಕ ಸಾಧಕರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.   ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಡಾ. ಕರಿಯಪ್ಪ ಮಾಳಿಗೆಯವರು ಮಾತನಾಡಿ,  ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಕುರಿತು ಯುವ ಸಮುದಾಯಕ್ಕೆ ಅಗತ್ಯ ಮಾರ್ಗದರ್ಶನ ಮಾಡಿದರು.  ಈ ರೀತಿ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಸಾಂಸ್ಕೃತಿಕವಾಗಿ ಕನ್ನಡ ಮಾತನಾಡಿ, ಕನ್ನಡದ ಹಾಡುಗಳನ್ನು ಹಾಡಿ, ಕನ್ನಡವನ್ನು ಪರಸಿರಿ ಎಂದು ಹೇಳಿದರು.  ಮತ್ತೋರ್ವ ಅಥಿತಿಗಳಾಗಿ ಆಗಮಿಸಿದ್ದ ಶ್ರೀ ಗಂಗಾವತಿ ಪ್ರಾಣೇಶ್ ಮಾತುಗಳ ಮೂಲಕವೇ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಟಿ.ಎಸ್.ರವಿಯವರು ಇಂದು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಬೇಕು, ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಚಾಲಕರಾದ ಶ್ರೀ ಯೋಗೀಶ್ ಸಹ್ಯಾದ್ರಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾಗೂ ಈ ಸಾಂಸ್ಕೃತಿಕ ಹಬ್ಬದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎ. ಲಿಂಗಾರೆಡ್ಡಿಯವರು, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿಯವರು, ಉಪಾಧ್ಯಕ್ಷರಾದ ಶ್ರೀ ಬಿ.ಎಲ್. ಅಮೋಘ್‌ರವರು, ಎಲ್ಲಾ ವಿಭಾಗಗಳ ಪ್ರಾಚಾರ್ಯರು, ಉಪನ್ಯಾಸಕರುಗಳು, ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಚಿತ್ರದುರ್ಗ ನಗರದ ನಾಗರೀಕರು ಪಾಲ್ಗೊಂಡಿದ್ದರು.      ಹಾಸ್ಯ ದಿಗ್ಗಜರಾದ ಶ್ರೀ ಗಂಗಾವತಿ ಪ್ರಾಣೇಶ್, ಶ್ರೀ ನರಸಿಂಹ ಜೋಷಿ, ಶ್ರೀ ಬಸವರಾಜ ಮಹಾಮನಿ ಎಲ್ಲರನ್ನು ತಮ್ಮ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ರಂಜಿಸಿದರು.