ಪಾಟ್ನಾ : 2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಜೊತೆಗೆ ಗುರುತಿಸಿಕೊಳ್ಳದೇ ಇರುವುದಕ್ಕೆ ಎಲ್ ಜೆಪಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಸದ್ಯದಲ್ಲೇ ನಡೆಯಲ್ಲಿರುವ ಚುನಾವಣೆಯಲ್ಲಿ ‘ಬಿಹಾರ ಫಸ್ಟ್’ , ಬಿಹಾರಿ ಫಸ್ಟ್’ ಎಂಬ ಘೋಷಣೆಯೊಂದಿಗೆ ವಿಷನ್ ಡಾಕ್ಯುಮೆಂಟ್ ಅನ್ನು ಪ್ರತಿಪಾದಿಸಲು ಲೋಕತಾಂತ್ರಿಕ ಜನಶಕ್ತಿ ಪಕ್ಷ (ಎಲ್ ಜೆಪಿ) ನಿರ್ಧರಿಸಿದೆ ಅಂತ ತಿಳಿದು ಬಂದಿದೆ.

ಚಿರಾಗ್ ಪಾಸ್ವಾನ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಎಲ್ ಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಇನ್ನೂ ಈ ಬಾರಿಯ ಚುನಾವಣೆಯಲ್ಲಿ ಎಲ್‌ಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲು ಮುಂದಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಲಿದ್ದು, ಇದರೊಂದಿಗೆ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರೆಯಲಿದೆ ಎನ್ನಲಾಗಿದೆ.

ಈ ನಡುವೆ ಮಣಿಪುರದಲ್ಲಿ ನಡೆದಂತೆ ಎಲ್ ಜೆಪಿ ಯು ಚುನಾವಣೆ ನಂತರ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಎಲ್ ಜೆಪಿಯ ‘ಬಿಹಾರ ಮೊದಲು, ಬಿಹಾರಿ ಫಸ್ಟ್’ ವಿಷನ್ ಡಾಕ್ಯುಮೆಂಟ್ ನಲ್ಲಿ ಪಟ್ಟಿ ಮಾಡಲಾಗಿರುವ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಜೆಡಿ(ಯು) ಸಿದ್ಧವಿಲ್ಲ ಎನ್ನಲಾಗಿದೆ.