ಚಿತ್ರದುರ್ಗ: ಅಂದಿನ ಕಾಲದಲ್ಲೇ ಕೆರೆ ಕಾಲುವೆ ನಿರ್ಮಿಸಿ, ಅರವಟ್ಟಿಗೆ ಏರ್ಪಡಿಸುತ್ತಿದ್ದ ಕಾಯಕ ಯೋಗಿ ಸಿದ್ಧರಾಮೇಶ್ವರರು ನಮ್ಮ ಎಲ್ಲಾ ಜನೋಪಯೋಗಿ ಕಾರ್ಯಕ್ರಮಗಳಿಗೆ ಪ್ರೇರಣೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದೀಕ್ಷೆಯ 20ನೇ ವಾರ್ಷಿಕೋತ್ಸವ, ಪಟ್ಟಾಕಾರದ 9ನೇ ವಾರ್ಷಿಕೋತ್ಸವ ಪ್ರಯುಕ್ತ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಭೋವಿ ಜನೋತ್ಸವದ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಮುರುಘಾಮಠದಲ್ಲಿ ಕಳೆದ 25 ವರ್ಷಗಳಿಂದ ಸರಳ ಸಾಮೂಹಿಕ ವಿವಾಹ ನಡೆಸಿಕೊಂಡು ಬರಲಾಗುತ್ತಿದೆ ಎಂದರೆ ಅದಕ್ಕೆ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಪ್ರೇರಣೆಯೇ ಕಾರಣ ಎಂದು ಹೇಳಿದರು.
ಭೋವಿ ಜನಾಂಗಕ್ಕೆ ಉಜ್ವಲ ಇತಿಹಾಸವಿದೆ. ಸಾಮಾಜಿಕ ನಿಷ್ಠೆ ನಿಮ್ಮೆಲ್ಲರಿಗೂ ಬೇಕಾಗಿದೆ. ನೀವೆಲ್ಲರೂ ಇಷ್ಟೊಂದು ದೊಡ್ಡ ಮಟ್ಟಕ್ಕೆ ಕೂಡಿರುವುದು ನೋಡಿದರೆ ನಮಗೆ ಅತೀವ ಸಂತಸ ಆಗುತ್ತಿದೆ. ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಎಲ್ಲರನ್ನೂ ಅಂತಃಕರಣದಿಂದ ನೋಡುತ್ತಾರೆ. ಎಲ್ಲರನ್ನೂ ಅಪ್ಪಿಕೊಳ್ಳುತ್ತಾರೆ. ಇಡೀ ರಾಜ್ಯ ಹಾಗೂ ಹೊರ ರಾಜ್ಯಗಳ ಭೋವಿ ಜನರನ್ನು ಸಂಘಟಿಸಿದ ಕೀರ್ತಿ ಇಮ್ಮಡಿ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಹರಿಹರ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದ ಮಠದ ಯಾದವಾನಂದ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ ಸೇರಿದಂತೆ ಮತ್ತಿತರ ಗುರುಪೀಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.