ಚಿತ್ರದುರ್ಗ: ಭಾರತದ ಸಂವಿಧಾನ ಸರ್ವರನ್ನು ಸಮನಾಗಿ ಕಾಣುತ್ತದೆ. ಮೇಲು ಕೀಳು, ಭಾವನೆಯಿಲ್ಲದೆ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ಆಧಾರ ಸ್ತಂಭವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಅವರು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಇವರ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಮಂಗಳವಾರ ನಗರದ ವಕೀಲರ ಭವನದಲ್ಲಿ ಆಯೋಜಿಸಿದ್ದ ’ಮೂಲಭೂತ ಕರ್ತವ್ಯಗಳು’ ಕುರಿತು ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
೧೯೪೯ ರ ನವೆಂಬರ್ ೨೬ ರಂದು ಭಾರತದ ಸಂವಿಧಾನ ಅಂಗೀಕಾರವಾಗಿದ್ದು, ಈ ದಿನ ರಾಷ್ಟ್ರದಲ್ಲಿ ಸ್ಮರಣೀಯ ದಿನವಾಗಿದೆ. ಇಂದು ಭಾರತದಾದ್ಯಂತ ಎಲ್ಲಾ ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಬೃಹತ್ ರಾಷ್ಟ್ರವನ್ನು ಒಗ್ಗೂಡಿಸಿ, ವಿವಿಧ ಭಾಷೆ, ಧಾರ್ಮಿಕ ಪದ್ಧತಿ, ಆಹಾರ, ಉಡುಗೆ, ತೊಡುಗೆ ಹೀಗೆ ಹಲವಾರು ವಿಧಗಳಲ್ಲಿ ವೈವಿಧ್ಯತೆಯಿದ್ದರೂ, ಎಲ್ಲರಲ್ಲೂ ಭ್ರಾತೃತ್ವ ಭಾವನೆ ಬೆಳೆಸಿ, ಎಲ್ಲರ ಪಾಲಿನ ರಕ್ಷಣೆಗೆ ದಾಖಲೆ ಭಾರತದ ಸಂವಿಧಾನ. ರಾಷ್ಟ್ರದ ೧೩೦ ಕೋಟಿ ಜನರ ಕನಸು ಕಟ್ಟಿಕೊಳ್ಳಲು ಉತ್ತಮ ಸಹಕಾರ ನಮ್ಮ ಸಂವಿಧಾನದ್ದು ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ ವಟವಟಿ ಮಾತನಾಡಿ, ೧೯೪೭ ರ ಡಿಸೆಂಬರ್ ೯ ರಂದು ಡಾ. ಬಿ.ಆರ್ ಅಂಬೇಡ್ಕರ್ ಅವರ ಕರಡು ಸಮಿತಿಯ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನೆಗೆ ಅಡಿಪಾಯ ಹಾಕಲಾಯಿತು. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವಿದ್ದು, ಆಯಾ ಕ್ಷೇತ್ರದಲ್ಲಿ ಅದರದೇ ಆದ ನೀತಿ ನಿಯಮಗಳನ್ನು ಎಲ್ಲರೂ ಪಾಲಿಸಲೇಬೇಕು. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ಬೃಹತ್ ರಾಷ್ಟ್ರ. ಎಲ್ಲರಿಗೂ ಸಮಾನ ನ್ಯಾಯ ಕಲ್ಪಿಸುವ ದೃಷ್ಟಿಯಿಂದ ಈ ಬೃಹತ್ ಸಂವಿಧಾನವನ್ನು ರಚಿಸಲಾಗಿದೆ. ಜಗತ್ತಿನ ದೊಡ್ಡ ಸಂವಿಧಾನ ಭಾರತದ ಸಂವಿಧಾನ. ಇದನ್ನು ವಿಮರ್ಶಿಸಲು ಕಷ್ಟಸಾಧ್ಯ. ಮೂಲಭೂತ ಕರ್ತವ್ಯಗಳ ಕುರಿತು ೨೦೨೦ ರ ಏಪ್ರಿಲ್ ೧೪ ರವರೆಗೆ ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದರು.

೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬನ್ನಿಕಟ್ಟೆ ಹನುಮಂತಪ್ಪ ಆರ್. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಶಿವಣ್ಣ, ಪ್ರಧಾನ ಸರ್ಕಾರಿ ಅಭಿಯೋಜಕರು ಎನ್.ಎಸ್ ಮಲ್ಲಯ್ಯ, ವಕೀಲ ಸಂಘದ ಅಧ್ಯಕ್ಷ ಎಸ್. ವಿಜಯಕುಮಾರ್, ಉಪಾಧ್ಯಕ್ಷ ಟಿ. ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ ಅನಿಲ್‌ಕುಮಾರ್ ಸೇರಿದಂತೆ ನ್ಯಾಯಾಧೀಶರು ಹಾಗೂ ವಕೀಲರು ಉಪಸ್ಥಿತರಿದ್ದರು.
ಇದೇ ವೇಳೆ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಅವರು ಸಂವಿಧಾನ ದಿನದ ಪ್ರಯುಕ್ತ ’ಪ್ರತಿಜ್ಞಾ ವಿಧಿ’ ಬೋಧಿಸಿದರು.