ಚಿತ್ರದುರ್ಗ: ಚಳ್ಳಕೆರೆಯ ಆದರ್ಶ ಶಾಲೆಯೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದ ಉತ್ತರ ಪ್ರದೇಶ ರಾಜ್ಯ ಮೂಲದ 20 ಜನರಲ್ಲಿ (ಪಿ 2234 ರಿಂದ ಪಿ-2253) ಕೋವಿಡ್-19 ವೈರಸ್ ಸೋಂಕು ಇರುವುದು ಮಂಗಳವಾರದ ವರದಿಯಲ್ಲಿ ದೃಢಪಟ್ಟಿದೆ.  ಸೋಂಕಿತರ  ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು,  ಇವರೆಲ್ಲರೂ ತಮಿಳುನಾಡಿನಿಂದ ಉತ್ತರಪ್ರದೇಶಕ್ಕೆ ಹೋಗುವ ಪ್ರಯಾಣಿಕರಾಗಿದ್ದು,  ಇವರು ಯಾರೂ ಕೂಡ ಚಿತ್ರದುರ್ಗ ಜಿಲ್ಲೆಯವರಲ್ಲ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ತಮಿಳುನಾಡು ರಾಜ್ಯದ ಚೆನ್ನೈನಿಂದ ಮೇ. 14 ರಂದು 59 ಜನ ಕಾರ್ಮಿಕರು ಈಚರ್ ವಾಹನದಲ್ಲಿ ಉತ್ತರ ಪ್ರದೇಶ ರಾಜ್ಯದ ತಮ್ಮ ಸ್ವಂತ ಊರಿಗೆ ತೆರಳಲು ಹೊರಟು, ಹೊಸೂರು, ಚಿಕ್ಕಬಳ್ಳಾಪುರ, ಪಾವಗಡ ಮೂಲಕ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಗಡಿಯಲ್ಲಿನ ನಾಗಪ್ಪನಹಳ್ಳಿ ಗೇಟ್ ಚೆಕ್‍ಪೋಸ್ಟ್ ಪ್ರದೇಶಕ್ಕೆ ಮೇ. 15 ರಂದು ಬಂದಿದ್ದರು.  ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು ವಾಹನ ತಡೆದು, ತಪಾಸಣೆ ನಡೆಸಿದಾಗ,  ಯಾವುದೇ ಅನುಮತಿ ಪತ್ರವಿಲ್ಲದೆ ಇವರು ಪ್ರಯಾಣ ಬೆಳೆಸಿರುವುದು ಕಂಡುಬಂದು, ವಾಹನ ಚಾಲಕನ ಸಮೇತ ಈ ಎಲ್ಲರನ್ನು ಚಳ್ಳಕೆರೆಯ ಪಾವಗಡ ರಸ್ತೆಯಲ್ಲಿನ ಆದರ್ಶ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು.  ಬಳಿಕ ವಾಹನ ಚಾಲಕನಿಗೆ ಜ್ವರದ ಲಕ್ಷಣ ಕಂಡುಬಂದ ಕಾರಣ, ಈತನ ಗಂಟಲುದ್ರವ ಮಾದರಿಯನ್ನು ಮೇ. 18 ರಂದು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿಕೊಡಲಾಯಿತು.  ವಾಹನ ಚಾಲಕನಿಗೆ ಕೋವಿಡ್-19 ಸೋಂಕು ಇರುವುದು ಮೇ. 22 ರಂದು ದೃಢಪಟ್ಟ ಕಾರಣ, ಈತನನ್ನು ಚಿತ್ರದುರ್ಗದ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.  ಈತನ ಜೊತೆಗೆ ವಾಹನದಲ್ಲಿ ಬಂದಿದ್ದ ಎಲ್ಲ 58 ಜನರನ್ನೂ ಪ್ರಾಥಮಿಕ ಸಂಪರ್ಕಿತರು ಎಂದು ಪರಿಗಣಿಸಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಮುಂದುವರೆಸಿ,  ಇವರೆಲ್ಲರ ಗಂಟಲುದ್ರವ ಹಾಗೂ ನ್ಯಾಸೋಫೆರಾಂಜಲ್ ಸ್ವಾಬ್ ಮಾದರಿಯನ್ನು ಸಂಗ್ರಹಿಸಿ ಮೇ. 22 ರಂದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.  ಇದೀಗ 20 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಉಳಿದವರ ಪರೀಕ್ಷಾ ವರದಿ ಬರುವುದು ಬಾಕಿ ಇದೆ.  ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಇವರನ್ನು ಬಿಸಿಎಂ ಹಾಸ್ಟೆಲ್‍ನ ಕೋವಿಡ್ ಕೇರ್ ಸೆಂಟರ್‍ನಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯದೊಂದಿಗೆ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.  ಸೋಂಕಿತರ ಸಂಪರ್ಕಕ್ಕೆ ಬಂದ ಪ್ರಾಥಮಿಕ ಮತ್ತು ದ್ವಿತೀಯ ಹಂತದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.