ಬೆಂಗಳೂರು: ಚಿತ್ರನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಪಾಲಾಗಿರುವ ಇವರುಗಳ  ಜಾಮೀನು ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.

ಪ್ರಕರಣದ ಆರೋಪಿಗಳಾದ ಸಂಜನಾ , ರಾಗಿಣಿ ದ್ವಿವೇದಿ, ಪ್ರಶಾಂತ್ ರಂಖಾ ಅವರ ಜಾಮೀನು ಅರ್ಜಿ ಹಾಗೂ ಪ್ರಕರಣದ ಪ್ರಮುಖ ಆರೋಪಿಯಾದ ಶಿವಪ್ರಕಾಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.

ತಮಗೆ ಜಾಮೀನು ನೀಡಬೇಕೆಂದು ಪ್ರಕರಣದ ಆರೋಪಿಗಳು ಹೈಕೋರ್ಟ್‍ನ ನ್ಯಾಯಮೂರ್ತಿ ಶ್ರೀ ಹರೀಶ್‍ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ವಾದವಿವಾದ ಆಲಿಸಿದ್ದ ನ್ಯಾಯಾಲಯ ಕಳೆದ 24ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇಂದು ವಿಡಿಯೋ ಕಾನರೆನ್ಸ್ ಮೂಲಕ ಈ ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸಿದರು.

ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದರಿಂದ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವೊಂದೇ ಈಗ ಅವರಿಗಿರುವ ದಾರಿ. ಸುಪ್ರಿಂಕೋರ್ಟ್‍ಗೂ ಮೇಲ್ಮನವಿ ಅರ್ಜಿ ಹಾಕಿದರೂ ಕನಿಷ್ಠ ಪಕ್ಷ 15 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲೇ ಇರಬೇಕಾಗುತ್ತದೆ.! ಹಾಗಾಗಿ ಈ ನಟಿಯರಿಗೆ ಜೈಲೇ ಗತಿ.!