ಧಾರವಾಡ: ಈದ್ ಮಿಲಾದ್ ಹಬ್ಬವನ್ನು ಅಂಜುಮನ್ ಸಂಸ್ಥೆ ಸದಸ್ಯರು ನಗರದಲ್ಲಿ  ವಿನೂತನವಾಗಿ ಆಚರಣೆ ಮಾಡಿದರು.

ಹಬ್ಬದ ಅಂಗವಾಗಿ ಮುಸ್ಲಿಂರು ಹಚ್ಚುವ ಡಿಜೆ ಅಬ್ಬರದ ಬದಲಿಗೆ ಎಲ್ಲಾ ಗಲ್ಲಿಯ ಮುಸ್ಲಿಂರನ್ನು ಕೂಡಿಸಿ ಅಂಜುಮನ್ ಸಂಸ್ಥೆ ಅದೇ ದುಡ್ಡಿನಲ್ಲಿ, ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಣ್ಣು, ಹಾಲು, ಶಾಲುಗಳನ್ನು ವಿತರಣೆ ಮಾಡಲು ಮನವಿ ಮಾಡಿದ್ದರು. ಆ ಪ್ರಕಾರ ಎಲ್ಲಾ ಗಲ್ಲಿಯ ಮುಸ್ಲಿಂರು ಸೇರಿ ಹಣ ಸಂಗ್ರಹಿಸಿ ಅದೇ ದುಡ್ಡಿನಲ್ಲಿ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಶಾಲುಗಳನ್ನು ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಎಲ್ಲ ಸಮಾಜ ಬಾಂಧವರು ಕೂಡ ಧ್ವನಿವರ್ಧಕಗಳನ್ನು ಬಳಕೆ ಮಾಡದೇ ಇದ್ದರೆ, ಶಬ್ದ ಮಾಲಿನ್ಯ ತಡೆಗಟ್ಟಬಹುದು. ಅದೇ ದುಡ್ಡಿನಲ್ಲಿ ಬಡ ರೋಗಿಗಳಿಗೆ ಅನುಕೂಲ ಮಾಡಿ ದೇವರ ಪ್ರೀತಿಗೆ ಪಾತ್ರರಾಗಬೇಕು ಎಂದರು.

ಪಾಲಿಕೆ ಹಿರಿಯ ಸದಸ್ಯ ದೀಪಕ ಚಿಂಚೊರೆ, ಜಿಲ್ಲಾಶಸ್ತ್ರ ಚಿಕಿತ್ಸಕ ಡಾ.ಗಿರಿಧರ ಕುಕನೂರ, ಚಿಕ್ಕ ಮಕ್ಕಳ ತಜ್ಞ ಡಾ.ಪಿ.ಎಂ.ನಾಡಗೌಡ, ಕಾರ್ಯದರ್ಶಿ ನಜೀರ ಹುಸೇನ್ ಮನಿಯಾರ್, ಉಪಾಧ್ಯಕ್ಷ ಅಲ್ ಹಜ್ ಅಬ್ದುಲ್ ಅಜೀಜ ದಾಸನಕೊಪ್ಪ, ಜಂಟಿ ಕಾರ್ಯದರ್ಶಿ ರಫೀಕ ಅಹ್ಮದ್ ಶಿರಹಟ್ಟಿ, ಮಹ್ಮದ್ ಗೌಸ ಮಕಾನದಾರ, ರಫಿಕ ಬಿಸಿ, ನಜೀರ ಅಹ್ಮದ ಬಳಬಟ್ಟಿ ಮುಂತಾದವರು ಉಪಸ್ಥಿತರಿದ್ದರು.