ದೇವರು ಭಕ್ತಿಯಿಂದ ಬೇಡಿದ್ರೆ, ನಾವು ಕೇಳಿದ್ನ ಕೊಡ್ತಾನಂತೆ. ಅವನು ಕೊಡ್ತಾನೊ ಇಲ್ವೊ ಗೊತ್ತಿಲ್ಲ, ಅದಾನೊ ಇಲ್ವೋ ಯಾರಿಗೂ ಗೊತ್ತಿಲ್ಲ. ಆದ್ರೆ ನಂಬಿಕೆ ಮಾತ್ರ ದೇವರು ಅದಾನಂತ. ಆದರೆ ನಾನ್ ಮಾತ್ರ ಒಬ್ಬಾಕೀನ ನೋಡೀನಿ. ‘ಆಕಿ ಖಂಡಿತ ದೇವ್ರೇ’. ದೇವ್ರು ನಾವ್ ಕೇಳಿದ್ನ ಕೊಟ್ಟರೆ ಇಕಿ ಕೇಳೋಕೂ ಮುಂಚೇನೆ ಕೋಡ್ತಾಳೆ, ಬೇಕಾದ್ರೆ ತನ್ನ ಸರ್ವಸ್ವನೂ, ಆಕಿ ಬೇರೆ ಯಾರೂ ಅಲ್ಲ ನಮಗೆ ನಿಮಗೆ ಜನ್ಮ ನೀಡಿರೋ ಅಮ್ಮ.

ನಿಮಗೆ ನೆನಪಿದಿಯಾ ಆ ದಿನಗಳು, ನಾವು ಸಣ್ಣೋರಿದ್ದಾಗ ಆಕಿಗೆ ಕಾಲಲ್ಲಿ ಒದ್ರೆ, ಆ ಕಾಲಿಗೆ ಮುತ್ತಿಟ್ಟು ನಗ್ತಿದ್ಲು, ನಾವು ಅತ್ತರೆ, ಆಕಿನೂ ಅಳ್ತಾ, ಆಟ ಆಡಿಸಿ, ಮುದ್ದು ಮಾಡಿ, ತುತ್ತು ಕೊಡ್ತಾಳೆ. ತನ್ನ ಪ್ರಾಣಾನೇ ಅಡವಿಟ್ಟು, ನವಮಾಸ ನರಳಿ ನಮಗೆ ಜನ್ಮನೀಡ್ತಾಳೆ. ಆ ಸಮಯದಲ್ಲಿ ಆಕಿ ಪಡೋ ನೋವು, ಮಗು ಮುಖ ನೋಡಿದ ಕೂಡಲೇ ನೀರಿನಂತೆ ಕರಗಿ ಮಂದಹಾಸ ಬೀರುತ್ತಾಳೆ. ನಿಜಕ್ಕೂ ಆಕೆ ದೇವರೆ ಸರಿ.

ಹಬ್ಬಕ್ಕೆ ನಮಗೆ ಹೊಸ ಬಟ್ಟೆ ಹಾಕಿಸೋದ್ರಲ್ಲೆ ಖುಷಿ ಪಡೋ ಅವಳು, ಮಕ್ಕಳ ಸಂತೋಷದಲ್ಲೇ ತನ್ನ ಸಂತೋಷ ಕಾಣುವ ಕರುಣಾಮಯಿ ತಾಯಿ. ತಾನು ಮಾತ್ರ ಹಳೇ ಸೀರಿಲಿ ಸಮಾಧಾನ ಪಡ್ತಾಯಿದ್ಲು. ಕೇಳಿದ್ರೆ ಹೇಳ್ತಾಯಿದ್ಲು, ಹೆ.. ಹೆ… ನನಗ್ಯಾಕೆ ಸುಮ್ನೆ ಹೊಸ ಬಟ್ಟೆ? ನನ್ನಲ್ಲಿ ಇರೋದೆ ಬೇಕಾದಷ್ಟಿದೆ? ಅಂತ. ನಿಜವಾಗ್ಲೂ ಅವಳ ಹತ್ರ ಬೇಕಾದಷ್ಟಿತ್ತು. ಬಟ್ಟೆಯಲ್ಲ, ಪ್ರೀತಿ. ಇದು ನನ್ನೊಬ್ಬಳ ತಾಯಿ ಮಾಡಿದ ತ್ಯಾಗವಲ್ಲ, ಪ್ರತಿ ಮನೆಯ ಪ್ರತಿ ತಾಯಿಯು ಇದರಲ್ಲಿ ಬಾಗಿ.

ಚಿಕ್ಕವರಿದ್ದಾಗ ಪ್ರತಿಸಲ ಆಟ ಆಡೋಕೆ ಹೋಗಿ ಗಾಯ ಮಾಡಿಕೊಂಡು ಬಂದಾಗಲೆಲ್ಲ ಬೈಯ್ತ ಇದ್ಲು. ನಂತರ ಆ ಗಾಯಕ್ಕೆ ಔಷಧಿ ಹಚ್ತ ಇದ್ಲು. ಆಗ ಅವಳ ಕಣ್ಣಲ್ಲಿ ಜಿನುಗೊ ಕಣ್ಣೀರು ಹೇಳ್ತಾ ಇತ್ತು, ಬಿದ್ದದ್ದು ನಾವಾದ್ರೂ ನೋವಾಗಿದ್ದು ಅವಳಿಗಂತ. ನಾವು ತಪ್ಪು ಮಾಡಿದಾಗ ನಿಷ್ಠೂರವಾಗಿ ಮಾತಾಡಿ, ಮತ್ತೆ ಮನಸೊಳಗೆ ಕರಗೋ ಜೀವ ಅದು. ಅತ್ತಾಗ ಬಂದು ನಮ್ಮನ್ನು ಎತ್ತಿ ಚಂದಮಾಮನ ತೋರಿಸ್ತಾ, ತುತ್ತು ಅನ್ನ ತಿನ್ನಿಸಿ, ಬೆಳೆಸಿ, ನಮ್ಮನ್ನ ಕತ್ತಲು ಕೋಣೆಯಿಂದ ಬೆಳಕಿನೆಡೆಗೆ ತಂದು ವಿದ್ಯೆ-ಬುದ್ದಿ ಕಲಿಸಿ, ಒಳಿತು-ಕೆಡಕು ತಿಳಿಸಲು ನಮಗೆ ಗುರುವಾದಳು.

ಜೀವನಕ್ಕಿಂತ ಹೆಚ್ಚಾಗಿ ಪ್ರೀತಿಸೋ ತಾಯಿಗೆ ತನ್ನ ಜೀವನದ ಬಗ್ಗೆ ಚಿಂತೆಯೇ ಇಲ್ಲ. ನಮ್ಮೆಲ್ಲರ ಸಂತೋಷ ನೋಡುತ್ತಾ ತನ್ನ ನೋವ ಮರೆಯೋ ತಾಯಿ ನಮಗೆಂದೂ ತನ್ನ ನೋವ ಹೇಳಲ್ಲ. ಮಗು ಅತ್ತಾಗ ಅಮ್ಮ ನಗೋದು ಅಂದ್ರೆ ಜೀವನದಲ್ಲಿ ಒಂದೇ ಒಂದು ಬಾರಿ. ಅದೇ ಮಗುವಿಗೆ ಜನ್ಮಕೊಟ್ಟಾಗ.

ಯಾರಿಲ್ಲ ಅಂದ್ರೂ ಬದುಕಬಹುದು, ಆದ್ರೆ ತಾಯಿ ಇಲ್ಲ ಅಂದ್ರೆ ತುಂಬಾನೆ ಕಷ್ಟ. ಅತಿಯಾಗಿ ಖುಷಿಯಾದಾಗ, ನೋವಾದಾಗ, ಆಶ್ಚರ್ಯ ಆದಾಗ, ಭಯವಾದಾಗ, ನಾವು ಕೂಗೋ ಮೊದಲ ಪದವೆ.. ‘ಅಮ್ಮ..’ ಇದೊಂದು ಪದ ಸಾಕು ತಾಯಿ ಮಹತ್ವ ತಿಳಿಯಲು.

ಅಪ್ಪ ಕೊಡೋಕಾಗ್ದೆ ಇರೋ ಪ್ರೀತಿನ ಅಮ್ಮ ಕೊಡ್ತಾಳೆ. ಆದ್ರೆ ಅಮ್ಮನ ಪ್ರೀತಿಯ ಯಾರಿಂದಲೂ ಕೊಡೋಕೆ ಆಗಲ್ಲ. ಜಗತ್ತಿನಲ್ಲಿ ಬೆಲೆಕಟ್ಟಲಾಗದಿರೋದು ಅಂದ್ರೆ ಅಮ್ಮ. ಆಕಿ ಪ್ರತ್ಯಕ್ಷ ದೇವತೆ, ಆಕಿದೂ ಕಲ್ಮಶವಿಲ್ಲದ ಪ್ರೀತಿ. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ ನಿಜ, ಆದ್ರೆ ಕೆಟ್ಟ ತಾಯಿ ಇರಲ್ಲ. ನಮ್ಮ ಕಷ್ಟಕ್ಕೆ ಸ್ಪಂದಿಸೊ ಮೊದಲ ಹೃದಯ ತಾಯಿ.

ದೇವರು ಯಾವಾಗಲೂ ಎಲ್ಲ ಕಡೆ ಇರಲು ಸಾಧ್ಯವಿಲ್ಲ. ಅದಕ್ಕೆ ಅವನು ತಾಯಿಯನ್ನು ಸೃಷ್ಠಿಸಿದ. ಪ್ರೀತಿ, ಸಹನೆ, ಶಾಂತಿಗೆ ಮತ್ತೊಂದು ಹೆಸರೇ ‘ನಮ್ಮಮ್ಮ’. ಮಕ್ಕಳು ಒಂದು ನಿಮಿಷ ಕಾಣಲಿಲ್ಲ ಅಂದ್ರೂನು ತವಕಿಸುತ್ತಾಳೆ. ಮಕ್ಕಳನ್ನ ಮೊದಲು ಮಲಗಿಸಿ, ನಂತರ ತಾನು ಮಲಗುತ್ತಾಳೆ. ತನ್ನ ಮಗುವಿಗೋಸ್ಕರ ಸಮಾಜವನ್ನೆ ಎದುರಿಸುವ ಸಾಮಥ್ರ್ಯ ಹೊಂದಿರುತ್ತಾಳೆ. ಮಕ್ಕಳ ಶ್ರೇಯಸ್ಸನ್ನೇ ಎದುರು ನೋಡುತ್ತಿರುತ್ತಾಳೆ. ಪ್ರತಿ ಮಕ್ಕಳ ಯಶಸ್ಸಿನ ಹಿಂದೆ ತಾಯಿಯ ಪಾತ್ರ ಇರುತ್ತದೆ.

ಪ್ರಪಂಚದ ನಿಯಮದಲ್ಲಿ ಹಕ್ಕಿ-ಪಕ್ಷಿಗಳು ತಮ್ಮ ಮರಿಗಳಿಗೆ ಹಾರುವುದನ್ನು ಮಾತ್ರ ಕಲಿಸುತ್ತವೆ. ಆದರೆ ತಾಯಿ ಮಕ್ಕಳ ಸಂಪೂರ್ಣ ಜವಾಬ್ದಾರಿ ಹೊಣೆಗಾರಿಕೆಯನ್ನು ಹೊತ್ತು ನಡೆಯುತ್ತಾಳೆ. ಅಮ್ಮನಿಗೆ ಮಗುವೆ ಸರ್ವಸ್ವ.

ಇವತ್ತು ನಾವೆಲ್ಲ ಬೆಳದಿದ್ದೇವೆ. ಅಲ್ಲದೆ, ಇಂದಿನ ಒತ್ತಡದ ಬದುಕಿನಲ್ಲಿರುವ ನಮಗೆ ಅಮ್ಮನ ಜೊತೆ ಕೂತು ಮಾತಾಡೋಕೆ ಸಮಯ ಇಲ್ಲ. ಇದ್ರೂ ‘ಏನ್ ಅವಳತ್ರ ಮಾತಾಡೋದು, ಅವಳಿಗೇನ್ ಗೊತ್ತಿದೆ’ ಅನ್ನೋ ನಿರ್ಲಕ್ಷ್ಯ.  ಒಂದು ಸಲ ಕಣ್ಮುಚ್ಚಿ  ನಿಮ್ಮ ತಾಯಿ ನಿಮಗೋಸ್ಕರ ಎಷ್ಟು ಕಷ್ಟಪಡ್ತಿದಾಳೆ, ಕಷ್ಟಪಟ್ಟಿದಾಳೆ ಅಂತಾ ಯೋಚನೆ ಮಾಡಿ. ಎಂಥ ತಾಯಿನ ದೂರ ಮಾಡ್ಕೋತಾ ಇದ್ದೀವಿ ಅಲ್ವಾ?..  ನೋವಾಗುತ್ತಲ್ವ? ಆಗಿದ್ದು ಆಗೋಯ್ತು ಬಿಟ್ಟು ಬಿಡಿ.  ಇವತ್ತು ಮತ್ತೆ ಮಕ್ಕಳಾಗಿ ಅವಳ್ನ ಪ್ರೀತಿಯಿಂದ ತಬ್ಕೊಳಿ. ತುಂಬಾ ದೊಡ್ಡವರಾಗಿದ್ದೀವಿ, ನಾಚಿಕೆ ಅನ್ಸುತ್ತಾ? ತಾಯಿ ಮುಂದೆ ಮತ್ತೆ ಮಗುವಾಗುವುದಕ್ಕೆ ಏಕೆ ನಾಚಿಕೆ? ತಬ್ಕೊಳ್ಳಿ. ಪ್ರೀತಿಯಿಂದ ಕೇಳಿ ಹೇಗಿದ್ದೀಯಾ ಅಂತ. ಅವಳು ಹೇಗೆ ಇರಲಿ, ನೀವು ಹೇಗಿದ್ದೀಯಾ ಅಂತ ಕೇಳಿದ ಮೇಲೆ ಅವಳು ತುಂಬಾ ಖುಷಿಯಿಂದ ಇರ್ತಾಳೆ. ಅವಳೊಟ್ಟಿಗೆ ಸ್ವಲ್ಪ ಸಮಯ ಕಳೆಯಿರಿ, ಅವಳ ಮಡಿಲಲ್ಲಿ ಒಮ್ಮ ಮಲಗಿ, ಆ ಪ್ರೀತಿ ಸವಿಯಿರಿ.

ಪ್ರಪಂಚದಾದ್ಯಂತ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನ ಆಚರಿಸಲಾಗುತ್ತದೆ. ತಾಯಿಗಿರುವ ವಿಶೇಷ ಸ್ಥಾನಮಾನ ಮನನ ಮಾಡುವ ಉದ್ದೇಶದಿಂದ ಇದು ಆಚರಣೆಗೆ ಬಂದಿತು. ಎಲ್ಲ ತಾಯಂದಿರಿಗೂ “ವಿಶ್ವ ತಾಯಂದಿರ ದಿನ”ದ ಶುಭಾಶಯಗಳು.

-ಶ್ವೇತಾ. ಜಿ

ಸಂಪರ್ಕ: 7483377648