ಬೀದರ್:  ರಾಹುಲ್ ಗಾಂಧಿಯವರು ಇಂದು ಬೀದರ್ ಗೆ ಬರಲಿದ್ದು ಜನಧ್ವನಿ ಕಾರ್ಯಕ್ರಮದ ಮೂಲಕ ಬರಲಿರುವ ಲೋಕಸಭಾ ಚುನಾವಣೆ ಗೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಹುರಿದುಂಬಿಸಲು ಇಂದಿನಿಂದಲೇ ನಾಂದಿ ಆಡಲಿದ್ದಾರೆ.!

ಉತ್ತರ ಕರ್ನಾಟಕದಲ್ಲಿ ಪಕ್ಷದ ಶಕ್ತಿಯನ್ನು ವೃದ್ಧಿಸಿಕೊಂಡರೆ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಪಡೆಯಬಹುದು ಎಂಬ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿಂದ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಸಚಿವ ಸಂಪುಟ ಮತ್ತು ಪಕ್ಷದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಈಶ್ವರ್ ಖಂಡ್ರೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಕ ಮಾಡಿತ್ತು. ಅಲ್ಲದೆ ಸಂಪುಟ ವಿಸ್ತರಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಉತ್ತರ ಕರ್ನಾಟಕದವರಿಗೆ ನೀಡಲು ನಿರ್ಧರಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಪ್ರಬಲ ಲಿಂಗಾಯತ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ನೀಡಲು ಹೈಕಮಾಂಡ್ ನಿರ್ಧರಿಸಿದ್ದು ಲೋಕಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಬೀದರನ್ ನಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಜನಧ್ವನಿ ಕಾರ್ಯಕ್ರಮಕ್ಕೆ ಸುಮಾರು 2 ಲಕ್ಷ ಮಂದಿ ಸೇರಲಿದ್ದಾರೆ .