“ಆಟವಾಡುವ ತನಕ ಹಿಂಗೆ ಆಡುದ್ದೆ| ಆಡಿದ್ದೆ, ನಿನ್ನ ಆಟ ಮುಗಿದ ಮೇಲೆ |ಕಿತ್ಕೊಂಡು ಓಡಿದ್ದೆ, ಓಡಿದ್ದೆ| ಆಟವಾಡಿಸುವನೊಬ್ಬ ಯಾರಿಗೂ ಕಾಣ್ದಂಗೆ ಕುತು|ಇಟು ವಟು ಮಾಟಮಂತ್ರ ಮಾಡಿ, ಮಾಡ್ದೆ|’’ ಎಂಬಂತಹ ಕವಿತೆಗಳನ್ನು ಸೃಜಿಸುತ್ತಾ, ಕನ್ನಡಿಗರ ಮನೆ-ಮನವನ್ನು ಕಟ್ಟಿದ ದಾರ್ಶನಿಕ ಕವಿ ಯುಗಧರ್ಮರಾಮಣ್ಣನವರು. ಸಂಕಟಗಳನ್ನೇ ಸಾಧನೆಗೆ ಸೋಪಾನವಾಗಿಸಿಕೊಂಡವರು. ಹಸಿವು, ಶೋಷಣೆಯೊಳಗೆ ಸಿಲುಕಿ ನರಳಿ ನರಳಿ ಅರಳಿದವರು. ಭವದ ಬದುಕಿಗೊಂದು ಭರವಸೆ ಮೂಡಿಸಿದವರು. ಶ್ರೀಯುತರು ದಾವಣಗೆರೆ ಜಿಲ್ಲೆ, ಚನ್ನಗಿರಿ ತಾ., ಸಂತೇಬೆನ್ನೂರು ಸಮೀಪದ ಸಿದ್ಧನಮಠ ಗ್ರಾಮದ ಕೃಷಿಕ ಕುಟುಂಬದ ಕೆಂಚಪ್ಪ-ಹುಚ್ಚಮ್ಮ ದಂಪತಿಗಳ ಮಡಿಲಲ್ಲಿ 1938ರ ಜೂನ್ 10ರಂದು ಜನಿಸಿದವರು. ಬಡತನದಲ್ಲಿ ಬಾಲ್ಯವನ್ನು ಕಳೆದವರು. ಒಂದೊತ್ತಿನ ಊಟಕ್ಕೆ ಪರದಾಡಿದವರು. ಒಂದನೇ ತರಗತಿಯಲ್ಲೇ ಐದು ಬಾರಿ ಅನುತ್ತೀರ್ಣರಾಗಿ, ಜೀತದಾಳಾಗಿ ದುಡಿದವರು.

ಜನತೆಯ ಕವಿಯಾಗಿ ಲೋಕಜ್ಞಾನವನ್ನು ಬಿತ್ತುವ ಕಾಯಕದಲ್ಲಿ ಸುಮಾರು ನಲವತ್ತೆಂಟು ವರ್ಷಗಳಿಂದ ನಿರತರಾದವರು. ಜನಪದರಲ್ಲಿ `ಅಭಿನವಕನಕ’’ ಎಂಬ ಅಭಿದಾನಕ್ಕೆ ಪಾತ್ರರಾಗಿರುವ ಯುಗಧರ್ಮರಾಮಣ್ಣನವರು ಕನಕದಾಸರ ಕುರಿತು ಕವಿತೆ ಕಟ್ಟಿ ಜನತೆಯ ಹೃದಯದಲ್ಲಿ ಚಿರಸ್ಥಾಯಿಯಾಗಿಸಿದವರು.ನಡೆದಾಡುವ ವಿಶ್ವಕೋಶ’, ಜಾನಪದ ಜಂಗಮ’ ಎಂದೇ ಖ್ಯಾತರಾಗಿರುವ ಯುಗಧರ್ಮರಾಮಣ್ಣ ಅವರು ತತ್ವಪದಕಾರರು, ವಚನಕಾರರು, ಆಶುಕವಿಗಳು, ಲಾವಣಿಕಾರರು.
`ಮಸ್ತಕ ಸರಿಯಿದ್ದರೆ, ಪುಸ್ತಕ ಸುಟ್ಟು ಬರೆಯಬಹುದು| ಅದರ ವಿಸ್ತಾರ ವಿಕಾಸ ಆದಂತೆ ಎಂತೆಂಥ| ಹಸ್ತಪ್ರತಿ ಹೊರಡುವುದೋ ಯುಗಧರ್ಮ’’ ಎಂಬಂತಹ ಸಾವಿರಾರು ತ್ರಿಪದಿಗಳನ್ನು, ಸಹಸ್ರ ಸಹಸ್ರ ವಚನಗಳನ್ನು, ನೂರಾರು ಲಾವಣಿಗಳನ್ನು, ಸಹಸ್ರ ಕವಿತೆಗಳನ್ನು ಯುಗಧರ್ಮರಾಮಣ್ಣರವರು ಬರೆದಿರುವರು. ಸುಮಾರು ಹದಿನೈದು ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಬ್ಯಾಗ್ ಹೊರುವ ಕಾಯಕ ಮಾಡಿದವರು. ಮಹಾಕವಿ ಕಾಳಿದಾಸ ಅವರಿಗೆ ಆದಂತಹ ವಿಸ್ಮಯ ಪ್ರಸಂಗವೊಂದು 1972ರಲ್ಲಿ ಯುಗಧರ್ಮರಾಮಣ್ಣ ಅವರಿಗೆ ಜರುಗಿದ ತತ್ ಕ್ಷಣದಿಂದಲೇ ಕವಿತೆ, ವಚನ, ತ್ರಿಪದಿ, ಲಾವಣಿ ಬರೆಯಲು ಆರಂಭಿಸಿದವರು.

1993ರಲ್ಲಿ ಯುಗಧರ್ಮತತ್ವಪದಗಳು’’ ಕೃತಿಯನ್ನು, 1994ರಲ್ಲಿಯುಗಧರ್ಮ ತ್ರಿಪದಿ’’, ಕನ್ನಡಮ್ಮನ ತೇರು’’ ಕವನಸಂಕಲನವನ್ನು,ವಚನಧರ್ಮ’’ ಕೃತಿಯನ್ನು, “ತೋಚಿದ್ಗೀಚು’’ ಕೃತಿಯನ್ನು ಪ್ರಕಟಿಸಿರುವರು. ಈ ಕೃತಿಗಳ ಈಗಾಗಲೇ ಹಲವು ಬಾರಿ ಮರುಮುದ್ರಣಗೊಂಡಿವೆ. ಇದಲ್ಲದೆ ಆರು ಸಾವಿರ ತ್ರಿಪದಿಗಳು, ಮೂರುಸಾವಿರ ವಚನಗಳನ್ನು, ಸಾವಿರಾರು ಕವಿತೆಗಳನ್ನು ಬರದಿರುವರು. ಅವುಗಳೆಲ್ಲ ಮುದ್ರಣ ಹಂತದಲ್ಲಿವೆ. 1972ರಿಂದ ಕರ್ನಾಟಕ ರಾಜ್ಯಾದ್ಯಂತ ಆಧುನಿಕ ಸರ್ವಜ್ಞರಾಗಿ, ಅಭಿನವ ಕನಕರಾಗಿ ತಿರುಗಾಡಿ ಇಳೆಯಲ್ಲಿನ ಇರುವಿನ ಅರಿವು ಬಿತ್ತುವ ಸುಮಾರು ಹದಿಮೂರು ಸಾವಿರದ ಮುನ್ನೂರ ಐವತ್ತೆಂಟು ಕಾರ್ಯಕ್ರಮಗಳನ್ನು ನೀಡಿರುವರು. ಶಿವಶರಣರು-ಹರಿದಾಸರು, ತತ್ವಪದಕಾರರ ಜೀವನ ಮತ್ತು ಆಶಯಗಳನ್ನು ಜನತೆಯ ಹೃದಯದಲ್ಲಿ ಬಿತ್ತುವ ದಾರ್ಶನಿಕ ಕವಿ ಯುಗಧರ್ಮರಾಮಣ್ಣ ಅವರು.

ಶ್ರೀಯುತರ ಸಾಹಿತ್ಯ ಸೇವೆ, ಸಾಂಸ್ಕøತಿಕ ಸೇವೆ, ಸಮಾಜಸೇವೆಯನ್ನು ಪರಿಗಣಿಸಿ ಸಿರಿಗೆರೆ ತರಳಬಾಳು ಬೃಹನ್ಮಠವು 1994ರಲ್ಲಿ `ಜಾನಪದರತ್ನ’ ಪ್ರಶಸ್ತಿಯನ್ನು, 2004ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ರಾಜ್ಯ ಪ್ರಶಸ್ತಿಯನ್ನು, ಚಿತ್ರದುರ್ಗ ಶ್ರೀಮುರಾಘಮಠವು 2005ರಲ್ಲಿ ಜಾನಪದ ಜಂಗಮ’’ ಪ್ರಶಸ್ತಿಯನ್ನು. 2010ರಲ್ಲಿ ಕರ್ನಾಟಕ ಸರ್ಕಾರವುಕನ್ನಡ ರಾಜ್ಯೋತ್ಸವ’’ ಪ್ರಶಸ್ತಿ, ಸುತ್ತೂರು ಮಠವು ಜಾನಪದ ನಡೆದಾಡು ನುಡಿಮುತ್ತು’’ ಪ್ರಶಸ್ತಿಯನ್ನು, ಗುದ್ದಲಿಸ್ವಾಮಿ ಮಠವುಜಾನಪದ ಕೋಗಿಲೆ’’ಪ್ರಶಸ್ತಿಯನ್ನು ಚಿಕ್ಕಮಗಳೂರು ಜಿಲ್ಲಾ ಕ.ಸಾ.ಪ.ವು ಜಾನಪದಸಿರಿಮುಡಿ’’ ಪ್ರಶಸ್ತಿಯನ್ನು, ಚನ್ನವೀರಸ್ವಾಮಿ ಮಠವುಜಾನಪದ ನುಡಿಸಂಗಮ’’ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗಿದೆ.
ಇಂದಿನ ತಲ್ಲಣ ಬದುಕಿಗೆ ನೆಮ್ಮದಿಯ ನಿಜದಾರಿ ತೋರಿಸುವ ಸಾಧನವೆಂದರೆ ಜಾನಪದ. ಈ ಜಾನಪದದೊಳಗೆ ಸಮಗ್ರ ಜಗತ್ತೇ ಅಡಗಿಕೊಂಡಿದೆ. ಇದು ಅನುಭವ ಮತ್ತು ಅನುಭಾವದ ಅಕ್ಷಯ ನಿಧಿ. ಈ ನಿಧಿಯು ಸರ್ವರ ಸೊತ್ತಾಗುವ ಅತಿ ಅಗತ್ಯವಾದ ಕಾಲದಲ್ಲಿದ್ದವೆ. ಶಾಂತಿ, ನೆಮ್ಮದಿ ಮತ್ತು ಆರೋಗ್ಯಕ್ಕಾಗಿ ಜನಪದರ ಜೀವನ ಆದರ್ಶ ಮತ್ತು ಅನನ್ಯವಾದುದು. ಈವೊತ್ತಿನ ಷೋಕಿ ಬದುಕು ಹಲವು ತೊಡಕುಗಳಿಗೆ ಒಡಕುಗಳಿಗೆ ಕಾರಣವಾಗಿದೆ. ಸಹಸ್ರ ಸಂಕಟಗಳಿಂದ ಮುಕ್ತಿ ಪಡೆಯಲು ಇರುವ ಏಕೈಕ ಮಾರ್ಗವೆಂದರೆ ಜಾನಪದ. ಈ ಜಾನಪದ ಜಗತ್ತಿನೊಳಗೆ ಸಾಹಿತ್ಯ, ಸಂಸ್ಕøತಿ, ಕಲೆಯೊಳಗೆ ಬೆರೆತ ಜೀವನವು ವಿಸ್ಮಯವಾಗಿ ಬಾಳಿ ಬೆಳಗಿದೆ. ಇಂದಿನ ಜನತೆಗೆ ಜಾನಪದ ಜಗತ್ತನ್ನು ಪರಿಚಯಿಸುವುದರ ಮೂಲಕ ಸಾರ್ಥಕ ಬದುಕಿಗೆ ಸರಿದಾರಿ ತೋರಿಸಲು ಸಾಧ್ಯವಾಗುತ್ತದೆ. ಈ ಹಿನ್ನಲೆಯಿಂದ ರೂಪಿತವಾಗಿರುವುದೆ ಯುಗಧರ್ಮರಾಮಣ್ಣನವರ “ಯುಗಧರ್ಮ ದಡ್ಡದೊಡ್ಡರ ವಿಶ್ವವಿದ್ಯಾಲಯ’’. ದಡ್ಡ ಮತ್ತು ದೊಡ್ಡರ ಸಂಗಮವಾಗಿ ಯುಗದ ಧರ್ಮವನ್ನು ಸ್ಥಾಪಿಸುವುದು ಈ ವಿಶ್ವವಿದ್ಯಾಲಯದ ಕೇಂದ್ರಕಾಳಜಿಯಾಗಿದೆ.

ಚಿತ್ರದುರ್ಗ:ಜಿ. ಹೊಸದುರ್ಗ:ತಾ., ಬ್ರಹ್ಮವಿದ್ಯಾನಗರದಲ್ಲಿ ಭಗೀರಥಪೀಠದ ಪೀಠಾಧ್ಯಕ್ಷರಾದ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಯವರ ಕೃಪಾಶ್ರಯದಲ್ಲಿ “ಯುಗಧರ್ಮ ದಡ್ಡದೊಡ್ಡರ ವಿಶ್ವವಿದ್ಯಾಲಯ’’ವನ್ನು ಸ್ಥಾಪಿಸಿಕೊಂಡಿರುವ ರಾಮಣ್ಣನವರು ಜನತೆಯು ಸಾರ್ಥಕ ಬದುಕಿನೆಡೆಗೆ ಸಾಗಲು ದಾರಿದೀಪವಾಗುವ ಕಾಯಕದಲ್ಲಿ ನಿರತರಾಗಿರುವರು. ಬೀಸುವಕಲ್ಲು, ಒಳಕಲ್ಲುಗಳನ್ನು ನಿರ್ಮಿಸಿ, ಜನಪದಶಿಕ್ಷಣವನ್ನು ನೀಡುತ್ತಿರುವರು. ಅಲ್ಲದೆ ತಮ್ಮ ಊರಾದ ಸಿದ್ಧನಮಠದಲ್ಲಿ ಸಂಘವೊಂದನ್ನು ಸ್ಥಾಪಿಸಿಕೊಂಡು ಅರಿವಿನ ಆಂದೋಲನದಲ್ಲಿ ನಿರತರಾಗಿರುವರು.

ಕಲಿ-ಕವಿ-ಭಕ್ತ-ಸಂತ ಎಂದೇ ಖ್ಯಾತರಾದ ಕನಕದಾಸರು ಅಪ್ರತಿಮ ಸಮಾಜಸುಧಾರಕರು. ಸವiಸಮಾಜ ನಿರ್ಮಾಣವಾಗಬೇಕೆಂದು ಹೋರಾಡಿದವರು. `ಕುಲ ಕುಲವೆಂದು ಹೊಡೆದಾಡುವಿರೇಕೆ? ಕುಲದ ನೆಲೆಯೇನಾದರೂ ಬಲ್ಲಿರಾ? ಎಂದು ಪ್ರಶ್ನೆಸುತ್ತಲೇ, ಮತಿಯೊಳಗಿನ ಕಲ್ಮಶವನ್ನು ಕಳೆದವರು. ಕನ್ನಡ ನಾಡು-ನುಡಿಗಷ್ಟೆ ಅಲ್ಲ ಇಡೀ ಲೋಕದ ಜನತೆಯಲ್ಲಿ ಅರಿವಿನ ಜಾಗೃತಿಯನ್ನುಂಟು ಮಾಡಿದವರು. ಕನ್ನಡ ಸಾಹಿತ್ಯ, ಸಂಸ್ಕøತಿಗೆ ಅವರು ನೀಡಿರುವ ಕೊಡುಗೆ ಅಪೂರ್ವವಾದುದು. ಆಧ್ಯಾತ್ಮ ಸರ್ವರ ಸ್ವತ್ತಾಗಬೇಕೆಂದು ಪ್ರತಿಪಾದಿಸಿದವರು. ಪಂಡಿತರು ಮತ್ತು ಪಾಮರರ ಮತಿಯೊಳಗೆ ಚಿಂತನ-ಮಂಥನ ಮಾಡುವ, ವರ್ತನೆಯಲ್ಲಿ ಪರಿವರ್ತನೆಯಾಗುವಂತಹ ಸಾಹಿತ್ಯನಿಧಿಯನ್ನು ನೀಡಿದವರು ಕನಕದಾಸರು. ಸಮಾಜೋಧ್ಯಾತ್ಮ ಜೀವಿಯಾದ ಕನಕದಾಸರ ಜೀವನ ಮತ್ತು ಸಾಧನೆ ಆದರ್ಶವಾದುದು.

ಅನುಕರಣೀಯವಾದುದು. ಕನಕದಾಸರ ಬದುಕು ಮತ್ತು ಸಾಧನೆಯ ಆಶಯ-ಹಂಬಲಗಳಿಗೆ ಅನುಸಾರವಾದ ಸಾಧನಶೀಲರಾಗಿರುವವರು ಯುಗಧರ್ಮರಾಮಣ್ಣರವರು. ಕನಕದಾಸರ ಚಿಂತನೆಗಳನ್ನು ವಿಸ್ತರಿಸುವ ಕಾಯಕದಲ್ಲಿ ನಿರತೆರಾಗಿರಲುವ ಶ್ರೀಯುತರ ಸಮಗ್ರ ಸೇವೆಗೆ ರಾಜ್ಯ ಸರ್ಕಾರದ “ಕನಕಶ್ರೀ’’-2020 ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅವರ ಸಾಧನೆಗೆ ಹಿಡಿದ ರನ್ನಗನ್ನಡಿಯಾಗಿದೆ.

ಲೇಖನ: ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್,
ಎಂ.ಎ.,ಎಂ.ಇಡಿ.,ಪಿಜಿಡಿಜೆ.,
ಪಿಎಚ್.ಡಿ.
ಸಹಾಯಕ ಪ್ರಾಧ್ಯಾಪಕರು, ಕನ್ನಡಭಾರತಿ.
ಉಪನಿರ್ದೇಶಕರು, ಪ್ರಸಾರಾಂಗ
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-577451
ಸಂಚಾರ ದೂರವಾಣಿಸಂ9481416989