ಭುವನೇಶ್ವರ : ಇಲ್ಲಿನ ರಾಜಭವನದ ಬಳಿಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪೆಟ್ರೋಲ್ ಬಂಕ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕಟಕ್ ನ ಎಸ್ ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕ್ಯಾಪಿಟಲ್ ಆಸ್ಪತ್ರೆಯ ನಿರ್ದೇಶಕ ಎಲ್.ಡಿ. ಸಾಹು ತಿಳಿಸಿದ್ದಾರೆ.

ಮೂರು ಅಗ್ನಿಶಾಮಕ ದಳಗಳು ಕಾರ್ಯ ಪೂರೈಸಿದ್ದು, ಪೆಟ್ರೋಲ್ ಪಂಪ್ ನಲ್ಲಿ ಬೆಂಕಿಯನ್ನು ಹತೋಟಿಗೆ ತಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಬೆಂಕಿಯು ಪೆಟ್ರೋಲ್ ಮತ್ತು ಡೀಸೆಲ್ ಇರುವ ಇನ್ನೆರಡು ಟ್ಯಾಂಕ್ ಗಳಿಗೆ ಹರಡದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಎಂದು ಪೊಲೀಸ್ ಆಯುಕ್ತ ಎಸ್.ಎಸ್.ಸಾರಂಗಿ ತಿಳಿಸಿದ್ದಾರೆ.

ಎರಡು ಟ್ಯಾಂಕರ್ ಗಳಿಂದ ಇಂಧನವನ್ನು ಹೊರಹಾಕಲು ತಕ್ಷಣ ಕ್ರಮ ಕೈಗೊಳ್ಳುವಂತೆ ಐಒಸಿಎಲ್ ಗೆ ಸೂಚಿಸಿದ್ದು, ಬೆಂಕಿ ಅವಘಡಕ್ಕೆ ಕಾರಣವೇನು ಇನ್ನೂ ತಿಳಿದುಬಂದಿಲ್ಲ ಎಂದು ಸಾರಂಗಿ ತಿಳಿಸಿದ್ದಾರೆ.