ದಾವಣಗೆರೆ : ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಸಹಕಾರ ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಚಿಂತನೆ ನಡೆದಿದೆ ಎಂದು ಸಹಕಾರ ಇಲಾಖೆ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು ಎಲ್ಲಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಕಡಿಮೆ ಬಡ್ಡಿ ದರದ ಸಾಲ ಒದಗಿಸುವ ಕುರಿತಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದೆ. ಅತೀ ಶೀಘ್ರದಲ್ಲೇ ಈ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಕೊರೊನಾ ವೈರಸ್ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ರೂ.ನಂತೆ 12.7 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಹೇಳಿದರು.