ಚಿತ್ರದುರ್ಗ: ಒತ್ತಡ ಅವಸರದ ನಡುವೆ ಮಾನವ ಆಧುನಿಕ ಸೌಲಭ್ಯಗಳನ್ನು ಹೆಚ್ಚು ಹೆಚ್ಚಾಗಿ ಬಳಸುತ್ತಿರುವುದರಿಂದ ಪ್ರಾಚೀನ ಜಾನಪದ ಕಲೆ ಕಣ್ಮೆರೆಯಾಗುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ವಿಷಾಧಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಪ್ರಿಯದರ್ಶಿನಿ ಮಹಿಳಾ ಮಂಡಳಿ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಐ.ಎಂ.ಎ.ಹಾಲ್‌ನಲ್ಲಿ ಭಾನುವಾರ ನಡೆದ ಜಾನಪದ ಸಂಭ್ರಮವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹುಟ್ಟಿದ ಜನಪದ ಹಾಡು, ಕಲೆ, ಸಂಗೀತ, ವಾದ್ಯ, ವೇಷಭೂಷಣಗಳನ್ನು ಹಿರಿಯರು ಉಳಿಸದಿದ್ದರೆ ಪ್ರಾಚೀನ ಜಾನಪದ ಕಲೆ ನಾಶವಾಗುತ್ತಿತ್ತು. ೨೧ ನೇ ಶತಮಾನದಲ್ಲಿ ಯುವಕರು ಜನಪದ ಕಲೆಯನ್ನು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಿಕೊಂಡಿದ್ದಾರೆ. ಹಾಗಾಗಿ ಹಿರಿಯರ ಅನುಭವ ಯುವಕರ ಆಧುನಿಕತೆಯನ್ನು ಬಳಸಿಕೊಂಡು ಜಾನಪದ ಕಲೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಟಿ.ವಿ., ಮೊಬೈಲ್, ಸಿನಿಮಾ, ವಾಟ್ಸ್‌ಪ್, ಫೇಸ್‌ಬುಕ್ ಸಂಸ್ಕೃತಿಗಳಿಂದ ಪ್ರಾಚೀನ ಕಲೆಯನ್ನು ಪ್ರದರ್ಶಿಸುವಷ್ಟು ತಾಳ್ಮೆ ಮನುಷ್ಯನಲ್ಲಿ ಇಲ್ಲದಂತಾಗಿದೆ. ರಾಜ್ಯದಲ್ಲಿ ಇನ್ನೂರಕ್ಕೂ ಹೆಚ್ಚು ಕಲೆಗಳಿವೆ. ಬಹಳಷ್ಟು ಕಲೆಗಳು ಕಾಣೆಯಾಗಿದ್ದು, ಕೆಲವೇ ಕೆಲವು ಮಾತ್ರ ಉಳಿದುಕೊಂಡಿವೆ. ಜಾನಪದ ಎಂಬುದು ಒಂದು ಪ್ರದೇಶ ನೆಲದ ಊರಿನ ಆತ್ಮಚರಿತ್ರೆಯಿದ್ದಂತೆ ಜಾನಪದ ಎಂದರೆ ಕೇವಲ ಖುಷಿಪಡುವುದಷ್ಟೆ ಅಲ್ಲ. ನೋವು ಸಂಕಟ ಅನುಭವವನ್ನೊಳಗೊಂಡಿದೆ. ದೇಹ ಮನಸ್ಸನ್ನು ಶುದ್ದಿಗೊಳಿಸಿ ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಡಿ.ಗೋಪಾಲಸ್ವಾಮಿ ನಾಯಕ. ಜಾನಪದ ಕಲಾವಿದ ವದ್ದಿಗೆರೆ ಕಾಂತರಾಜ್ ಜಾನಪದ ಸಂಭ್ರಮದ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಉಪನ್ಯಾಸಕ ಎ.ನಾಗರಾಜ್, ಓ.ಮೂರ್ತಿ, ಸರಸ್ವತಿ ವೇದಿಕೆಯಲ್ಲಿದ್ದರು.
ಮಳಲಿ ಶ್ರೀನಿವಾಸ್ ಸೇರಿದಂತೆ ಜಾನಪದ ಸಾಹಿತ್ಯಾಸಕ್ತರು ಜಾನಪದ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಓ.ಮೂರ್ತಿ ಪ್ರಾರ್ಥಿಸಿದರು. ಜೆ.ಷಣ್ಮುಖ ಸ್ವಾಗತಿಸಿದರು. ಎಂ.ಚಿದಾನಂದಮೂರ್ತಿ ನಿರೂಪಿಸಿದರು. ರಮೇಶ್ ವಂದಿಸಿದರು.