ಚಿತ್ರದುರ್ಗ:ಮುರುಘಾಮಠದಿಂದ ಅಸ್ಸಾಂನ ಗುವಾಹಟಿಯಲ್ಲಿ ರಾಷ್ಟ್ರೀಯ ಏಕತಾ ಶರಣ ಮೇಳದ ಅಂಗವಾಗಿ ಅಸ್ಸಾಂ , ಮೇಘಾಲಯ ಮತ್ತು ಅರುಣಾಚಲ ಪ್ರದೇಶ ಈ ಮೂರು ರಾಜ್ಯ ಪ್ರವಾಸವನ್ನು ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಶರಣ ಮೇಳ ಸಮಾರಂಭ ನಡೆದು ನಂತರ ಅರುಣಾಚಲ ಪ್ರದೇಶದ ತವಾಂಗ್ ಗೆ ಭೇಟಿ ನೀಡಲಾಯಿತು. ಅಲ್ಲಿ ಭಾರತ – ಚೀನಾ ದೇಶದ ನಡುವೆ 1962 ರಲ್ಲಿ ಯುದ್ಧ ನಡೆಯಿತು. ಯುದ್ಧ ನಡೆದ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿಯ ವೀರಯೋಧ ಜಸ್ವತ್ ಸಿಂಗ್ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು ಜಸ್ವತ್ ಸಿಂಗ್ ನು ಏಕಾಂಗಿಯಾಗಿ 300 ಜನ ಚೀನಾ ಯೋಧರನ್ನು ಹತ್ಯೆ ಮಾಡಿದ.ಆತನ ಹೋರಾಟದಿಂದ ಹಿಮಾಲಯದ ಬೃಹತ್ ಕಣಿವೆ ಪ್ರದೇಶ ನಮ್ಮ ದೇಶದಲ್ಲಿ ಉಳಿದಿದೆ.

ಇದು ಈ ಪ್ರದೇಶದಲ್ಲಿ ಅತಿ ಎತ್ತರದ ಕಣಿವೆ ಇಲ್ಲಿಂದ ಈಶಾನ್ಯ ಭಾರತವನ್ನು ನಿಯಂತ್ರಣ ಮಾಡಲು ಸಾಧ್ಯವೆಂದು ಅರಿತ ಶತ್ರುಗಳನ್ನು ಸೋಲಿಸಿದ ವೀರಯೋಧ ಜಸ್ವತ್ ಸಿಂಗ್. ಅವನ ಪರಾಕ್ರಮಕ್ಕೆ ಚೀನಾ ದೇಶದ ಸೈನಿಕರೆಲ್ಲ ತತ್ತರಿಸಿದರು. ಅವರೆಲ್ಲ ಭಾವಿಸಿದ್ರು ನಮ್ಮ ಮೇಲೆ ಭಾರತೀಯ ಸೈನಿಕರು ಸಾವಿರಾರು ಜನರು ದಾಳಿಯನ್ನು ಮಾಡುತ್ತಿರಬಹುದೆಂದು ಆದರೆ ಅಲ್ಲಿ ಒಬ್ಬನೇ ಹೋರಾಟ ಮಾಡುತ್ತಿರುವ ಜಸ್ವತ್ ಸಿಂಗ್ ಎಂದು ಗೊತ್ತು ಮಾಡಿದ ಅವರು ಆತನನ್ನು ಬಂಧಿಸಿ ಅವನನ್ನು ಚೀನಾ ಗಡಿಯೊಳಗೆ ಒಯ್ದು ಅವನ ತಲೆಯನ್ನು ಕಡಿದು ಅದೇ ಸ್ಥಳದ ಗಿಡಕ್ಕೆ ನೇತು ಹಾಕಿ ಹೋಗಿದ್ದರು. ಜಸ್ವತ್ ಸಿಂಗ್ ನ ಪರಾಕ್ರಮ, ಶೌರ್ಯ, ತ್ಯಾಗವನ್ನು ನಮ್ಮ ಭಾರತೀಯರಿಗೆ ತಿಳಿಸಲು ಭಾರತ ಸರ್ಕಾರ ಜಸ್ವತ್ ಸಿಂಗ್ ಸ್ಮಾರಕ ಎಂಬ ಸ್ಮಾರಕ ನಿರ್ಮಾಣ ಮಾಡಿದೆ. ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದ ಕ್ಷಣ ನಮ್ಮ ಜೀವನದ ಅವಿಸ್ಮರಣೀಯ ಘಟನೆಯಾಗಿದೆ. ಕಾರಣ 1962ರಲ್ಲಿ ಭಾರತ -ಚೀನಾ ದೇಶದ ನಡುವೆ ಯುದ್ಧ ನಡೆದ ಸಂಧರ್ಭದಲ್ಲಿ ನಮ್ಮ ಮುರುಘಾಮಠದ ಶ್ರೀ ಜಯವಿಭವ ಜಗದ್ಗುರುಗಳವರು ದೇಶಕ್ಕಾಗಿ ಶ್ರೀಮಠದ ಚಿನ್ನದ ಕಿರೀಟ , ಚಿನ್ನದ ಉಂಗುರ , ಚಿನ್ನದ ವಿವಿಧ ಆಭರಣಗಳನ್ನು ದಾನವಾಗಿ ನೀಡಿದರು. ದೇಶಕ್ಕಾಗಿ ಚಿನ್ನವನ್ನು ನೀಡಿದ ಕೀರ್ತಿ ನಮ್ಮ ಮಠಕ್ಕೆ ಸಲ್ಲುತ್ತದೆಂದು ಸ್ಮರಿಸಿದರು. ನಮ್ಮ ದೇಶದ ನಿಜವಾದ ತ್ರಿಮೂರ್ತಿಗಳೆಂದರೆ ಸೈನಿಕ , ಕೃಷಿಕ , ಶಿಕ್ಷಕ ಇವರಿಂದ ದೇಶದ ಪ್ರಗತಿ. ಅದರಲ್ಲೂ ಸೈನಿಕರ ಸೇವೆಯು ಅನನ್ಯ. ಅವರ ತ್ಯಾಗವನ್ನು ನಾವೆಲ್ಲರೂ ಸ್ಮರಿಸಬೇಕು. ನಮ್ಮ ಸೈನಿಕರಿಂದ ದೇಶವು ಸುಭದ್ರವಾಗಿದೆ .ತವಾಂಗ್ ಈ ಪ್ರದೇಶದಲ್ಲಿ ಸದಾಕಾಲವೂ ಉಷ್ಣಾಂಶವು ತುಂಬಾ ಕಮ್ಮಿಯಿದ್ದು , ಇಲ್ಲಿ ಹಿಮವು ಬಿಳುತ್ತದೆ ಶೀತಗಾಳಿಯಲ್ಲಿ ನಾವು-ನೀವು ನಿಲ್ಲುವುದೆ ಒಂದು ಸಾಹಸವಾಗಿದೆ.

ಆದರೆ ನಮ್ಮ ಸೈನಿಕರು ನಮಗಾಗಿ , ದೇಶಕ್ಕಾಗಿ ಕಾಯುತ್ತಿದ್ದಾರೆ ಅವರ ಕಾರ್ಯ ಸ್ಮರಣಿಯ ಸೇವೆಯೆಂದು ಸ್ಮರಸಿದರು. ನಂತರ ತವಾಂಗ್ ನಗರದ ಯುದ್ದ ಸ್ಮಾರಕಕ್ಕೆ ಭೇಟಿ ನೀಡಿ ಅಂದು ಯುದ್ಧ ನಡೆದ ಮಾಹಿತಿಯನ್ನು ಒಂದು ಕಿರುಚಿತ್ರದ ಸಿನಿಮಾವನ್ನು ತೋರಿಸಲಾಯಿತು. ಅಲ್ಲಿ ಅಂದು ಹೋರಾಡಿ ಹುತಾತ್ಮರಾದ ವೀರಯೋಧರ ಸಮಾಧಿ , ಅವರು ಬಳಿಸಿದ ಬಂದೂಕು, ಬುಲೆಟ್ , ಹೆಲ್ಮೆಟ್ ಗಳು ಯುದ್ಧದ ಭಾವಚಿತ್ರಗಳನ್ನು ವೀಕ್ಷಣೆ ಮಾಡಿ ಮತ್ತು ಸ್ಮಾರಕಕ್ಕೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಕರ್ನಾಟಕದ ಸೈನಿಕರು ಬಂದು ಮುರುಘಾ ಶರಣರಿಗೆ ಗೌರವ ಸಲ್ಲಿದರು.ಇದೇ ಸಂಧರ್ಭದಲ್ಲಿ ಪಾಂಡೋಮಟ್ಟಿಯ ಗುರುಬಸವ ಮಹಾಸ್ವಾಮೀಜಿ, ಚಿತ್ರದುರ್ಗದ ಬಸವಮಾಚಿದೇವ ಸ್ವಾಮೀಜಿ, ದಾವಣಗೆರೆಯ ಬಸವಪ್ರಭು ಸ್ವಾಮೀಜಿ, ಸಿರಗುಪ್ಪದ ಬಸವಭೂಷಣ ಸ್ವಾಮೀಜಿ, ಹಾವೇರಿಯ ಬಸವ ಶಾಂತಲಿಂಗ ಸ್ವಾಮೀಜಿ, ಬ್ಯಾಡಗಿಯ ಬಸವ ಮುರುಘಾ ಸಾರಂಗ ದೇಶಿಕೇಂದ್ರ ಸ್ವಾಮೀಜಿ, ತಿಳುವಳ್ಳಿಯ ಬಸವ ನಿರಂಜನ ಸ್ವಾಮೀಜಿ, ಇಮ್ಮಡಿ ಬಸವ ಮೇದಾರ ಕೇತಯ್ಯ ಸ್ವಾಮೀಜಿ , ಚಿತ್ರದುರ್ಗ, ದಾವಣಗೆರೆ, ಬೆಂಗಳೂರು, ಧಾರವಾಡ ಮುಂತಾದ ಬಸವಕೇಂದ್ರದ ಪದಾಧಿಕಾರಿಗಳು ಸೇರಿದಂತೆ 60 ಕ್ಕೂ ಹೆಚ್ಚು ಪ್ರವಾಸಕ್ಕೆ ಬಂದ ಜನರು ಕಣ್ಣು ತುಂಬಿಕೊಂಡರು.