ಇಲ್ಲಿನ ವಸಂತಕುಂಜ್ ಪ್ರದೇಶದಲ್ಲಿರುವ ಪೇಜಾವರ ಮಠದ ಶಾಖೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಶ್ವ ಹಿಂದೂ ಪರಿಷತ್ನ ಮಾರ್ಗದರ್ಶಕ ಮಂಡಳಿ ಸದಸ್ಯ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸತತ 45 ದಿನಗಳ ಕಾಲ ವಿಶ್ವದಾದ್ಯಂತ ದೇಣಿಗೆ ಸಂಗ್ರಹ ಅಭಿಯಾನ ನಡೆಯಲಿದೆ ಎಂದರು.
ಪ್ರತಿಯೊಬ್ಬ ಭಕ್ತ ಕನಿಷ್ಠ ₹ 10 ದೇಣಿಗೆ ನೀಡುವಂತೆ ಮನವಿ ಮಾಡಲಾಗಿದೆ. ಪ್ರತಿ ಕುಟುಂಬ ಕನಿಷ್ಠ ₹ 100 ನೀಡಿ ರಸೀದಿ ಪಡೆಯುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿರುವ ಮಂದಿರ ನಿರ್ಮಾಣಕ್ಕೆ ನೆರವು ನೀಡಬೇಕು ಎಂದು ಅವರು ಕೋರಿದರು.
ರಾಮಮಂದಿರ ಕಟ್ಟಡದ ನಿರ್ಮಾಣದ ಅಂದಾಜು ವೆಚ್ಚ ಎಷ್ಟಿರಲಿದೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಸಂಜೆ ನಡೆಯಲಿರುವ ಕಾರ್ಯಕಾರಿ ಸಮಿತಿಯ ಮತ್ತೊಂದು ಸುತ್ತಿನ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ರಾಮಮಂದಿರ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಎಲ್ ಅಂಡ್ ಟಿ ಸಂಸ್ಥೆಗೆ ವಹಿಸಲಾಗಿದೆ. ಟಾಟಾ ಕನ್ಸಲ್ಟನ್ಸಿ ಸಂಸ್ಥೆಗೆ ಉಸ್ತುವಾರಿ ಹೊಣೆ ವಹಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು. ಪೇಜಾವರ ಮಠದ ಶಾಖೆಯ ವ್ಯವಸ್ಥಾಪಕರಾದ ಯು.ವಿ. ದೇವಿಪ್ರಸಾದ್ ಹಾಜರಿದ್ದರು.
No comments!
There are no comments yet, but you can be first to comment this article.