ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹನುಮಲಿ ಷಣ್ಮುಖಪ್ಪನವರು ಮಂಗಳವಾರ ಸಹಸ್ರಾರು ಅಭಿಮಾನಿಗಳೊಂದಿಗೆ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಹೊಳಲ್ಕೆರೆ ರಸ್ತೆಯಲ್ಲಿರುವ ಕನಕವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ಸುಡುಬಿಸಿಲಿಗೂ ಹೆದರದೆ ಅಭಿಮಾನಿಗಳು ಅಭ್ಯರ್ಥಿಗೆ ಜೈಕಾರಗಳನ್ನು ಹಾಕುತ್ತ ಸಾಗಿದರು.
ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಸೋಮವಾರ ಅಪಾರ ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸಿದ್ದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ ಕಾಂಗ್ರೆಸ್ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಕೂಡ ಅಭಿಮಾನಿಗಳೊಡಗೂಡಿ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಬಲಪ್ರದರ್ಶಿಸಿದರು.
ಸುಮಾರು ಒಂದು.ಕಿ.ಮೀನಷ್ಟು ಉದ್ದದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆ ಮಕ್ಕಳು ಕೈಯಲ್ಲಿ ಕಾಂಗ್ರೆಸ್ ಭಾವುಟಗಳನ್ನು ಹಿಡಿದು ಪಕ್ಷದ ಮೇಲಿನ ಅಭಿಮಾನವನ್ನು ಪ್ರದರ್ಶಿಸಿದರೆ ಇನ್ನು ಕೆಲವು ಮಹಿಳೆಯರು ಹೆಗಲಲ್ಲಿ ಪುಟ್ಟ ಮಕ್ಕಳನ್ನು ಹೊತ್ತು ಸುಡುಬಿಸಿಲಿನ ತಾಪಕ್ಕೆ ಸೆರಗನ್ನು ತಲೆಯೇ ಮೇಲೆ ಹೊದ್ದುಕೊಂಡು ಮೆರವಣಿಗೆಯಲ್ಲಿ ಸಾಗಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಆರ್.ಕೆ.ಸರ್ದಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಭಕ್ಷ್, ಎನ್.ಡಿ.ಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್.ಟಿ.ವಿಭಾಗದ ಅಧ್ಯಕ್ಷ ಮಂಜುನಾಥ್ ಇವರುಗಳನ್ನು ಅಭಿಮಾನಿಗಳು ಹೆಗಲ ಮೇಲೆ ಹೊತ್ತು ಕುಣಿಯುತ್ತ ಮೆರವಣಿಗೆಯಲ್ಲಿ ಸಂಭ್ರಮಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಆಂಜನೇಯ, ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ರುದ್ರಾಣಿ, ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಕಾರ್ಯಕಾರಿ ಸಮಿತಿ ಸದಸ್ಯೆ ಮೋಕ್ಷರುದ್ರಸ್ವಾಮಿ, ಆರತಿ ಮಹಡಿ ಶಿವಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಮೆಹಬೂಬ್‌ಪಾಷ, ಮಹಮದ್ ಅಹಮದ್ ಪಾಷ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್‌ಜಬ್ಬಾರ್, ಮಹಡಿಶಿವಮೂರ್ತಿ, ಫೈಲ್ವಾನ್ ತಿಪ್ಪೇಸ್ವಾಮಿ, ಸೈಯದ್‌ವಲಿಖಾದ್ರಿ, ಡಿ.ಎನ್.ಮೈಲಾರಪ್ಪ, ವಸಂತಕುಮಾರಿ, ಚಂದ್ರಕಲಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ.ಮೀನಾಕ್ಷಿ, ನಜ್ಮತಾಜ್, ಭಾಗ್ಯಮ್ಮ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪನವರಿಗೆ ಬೆಂಬಲಿಸಿದರು.