ಬಳ್ಳಾರಿ : ಹೊಸಪೇಟೆ ಬಳಿಯ ಮರಿಯಮ್ಮನ ಹಳ್ಳಿಯಲ್ಲಿ ಫೆ. 10ರಂದು ನಡೆದ ಬೆಂಜ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪಘಾತದ ವೇಳೆ ಕಾರಿನಲ್ಲಿ ಸಚಿವ ಆರ್.ಅಶೋಕ್ ಪುತ್ರ ಶರತ್ ಕೂಡ ಇದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.!

ಪೊಲೀಸರು ಮಾತ್ರ ಸಚಿವ ಆರ್.ಅಶೋಕ್ ಅವರ ಪುತ್ರ ಕಾರಿನಲ್ಲಿ ಇರಲಿಲ್ಲ ಎಂದು ಹೇಳಿಕೆ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಫೆ.10ರಂದು ಅಪಘಾತವಾದ ಬಳಿಕ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಮೈತ್ರಿ ಎಂಬ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಸುದ್ದಿಗಾರರೊಂದಿಗೆ ಮಾಹಿತಿ ನೀಡುವ ವೇಳೆ, ಅಂದು ಗಾಯಾಳುಗಳೊಂದಿಗೆ ಶರತ್ ಕೂಡ ಆಸ್ಪತ್ರೆಗೆ ಬಂದಿದ್ದರು ಎಂದು ತಿಳಿಸಿದ್ದಾರೆ.

ಅಂದು ಕಾರಿನಲ್ಲಿದ್ದವರು ಬಹಳ ಗಡಿಬಿಡಿಯಲ್ಲಿದ್ದರು. ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದವರ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಗಾಯಾಳುಗಳಿಗೆ ಬೇಗ ಸ್ಟ್ರೆಚರ್​ ಕೊಡಿ, ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳುತ್ತಿದ್ದರು. ನಂತರ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದರೆಂದು ಮೈತ್ರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳೆ ತಿಳಿಸಿದ್ದಾರೆ.

ಆದರೆ ಸಚಿವ ಅಶೋಕ್ ಅವರು ಕಾನೂನಿಗೆ ಯಾರು ದೊಡ್ಡವರಲ್ಲ ಎಂದು ಹೇಳಿದ್ದಾರೆ. ಅವರ ಮಾತು ಎಷ್ಟು ಸತ್ಯವೋ ಏನು.? ತನಿಖೆಯಿಂದ ಹೊರಬರಬೇಕಿದೆ ಸತ್ಯ.!