ಚಿತ್ರದುರ್ಗ: ಅವಶ್ಯಕತೆಗಿಂತಲೂ ಅಧಿಕ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಕೆ ಮಾಡುವುದರಿಂದ ಬೆಳೆಗಳಿಗೆ ರೋಗ ಮತ್ತು ಕೀಟಬಾಧೆ ಹೆಚ್ಚಾಗುವ ಸಂಭವವಿದ್ದು, ಮಿತಿಯಾಗಿ ಯೂರಿಯಾ ಬಳಸುವಂತೆ ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದು ಅಧಿಕ ಪ್ರಮಾಣದ ಯೂರಿಯ ಬಳಕೆಯಿಂದ ರೋಗ ಹಾಗೂ ಕೀಟಬಾಧೆ ಹೆಚ್ಚಾಗುವ ಸಂಭವವಿದೆ. ಯೂರಿಯಾ ರಸಗೊಬ್ಬರವನ್ನು ಮಣ್ಣು ಪರೀಕ್ಷಾ ವರದಿಯಲ್ಲಿನ ಶಿಫಾರಸ್ಸಿನ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಬೇಕು.  ರಸಗೊಬ್ಬರ ಮಾರಾಟ ದರವು ಉಳಿದೆಲ್ಲಾ ರಸಗೊಬ್ಬರಗಳಿಗೆ ಕಡಿಮೆ ಇರುದರಿಂದ, ಬಿತ್ತನೆ ಸಮಯದಲ್ಲಿ ಯೂರಿಯಾ ಮಾತ್ರ ಖರೀದಿಸದೇ ಸಮತೋಲನಾ ಪೋಷಕಾಂಶಗಳನ್ನು ಒದಗಿಸಲು ಕಾಂಪ್ಲೆಕ್ಸ್, ಡಿಎಪಿ, ಹಾಗೂ ಎಂಓಪಿ ರಸಗೊಬ್ಬರಗಳನ್ನು ಬಳಸುವುದು ಉತ್ತಮ.

ತೋಟಗಾರಿಕೆ ಬೆಳೆಗಳಿಗೆ ಹಾಗೂ ಹನಿ ನೀರಾವರಿ ಬೆಳೆಗಳಿಗೆ ಶೇ.100 ರಷ್ಟು ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಬೇಕು ಹಾಗೂ ಕಬ್ಬು ಬೆಳೆಗಾರರು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಅಮೋನಿಯಂ ಸಲ್ಪೇಟ್ ಬಳಸಬೇಕು.  ರಸಗೊಬ್ಬರಕ್ಕೆ ಅತಿ ಹೆಚ್ಚಿನ ಸಹಾಯಧನವನ್ನು ಕೇಂದ್ರ ಸರ್ಕಾರ ನೀಡುತ್ತಿರುವುದರಿಂದ ಆದಷ್ಟು ಮಿತವಾಗಿ  ಬಳಕೆ ಮಾಡಬೇಕು. ಯೂರಿಯಾ ರಸಗೊಬ್ಬರ ದಪ್ಪ ಕಾಳು ಹಾಗೂ ಸಣ್ಣ ಕಾಳಿನ ಅಳತೆಯಲ್ಲಿ ಸರಬರಾಜಾಗುತ್ತಿದ್ದು, ಆದರೆ ಪೋಷಕಾಂಶದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.  ಹೀಗಾಗಿ ರೈತರು ಲಭ್ಯವಿರುವ ಯಾವುದೇ ಗಾತ್ರದ ರಸಗೊಬ್ಬರ ಬಳಕೆ ಮಾಡಬಹುದು ಎಂದು  ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.