ಚಿತ್ರದುರ್ಗ : ರೈಲ್ವೆ ಹಳಿ ನಿರ್ಮಾಣ ಸಂದರ್ಭದಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಿಸುವಾಗ ಸಮೀಪದ ರೈತರಿಗೆ ತೊಂದರೆಯಾಗಿದ್ದಲ್ಲಿ, ಇಂತಹ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಹೇಳಿದರು.

ಅಜ್ಜಂಪುರ ಪಟ್ಟಣ ಸಮೀಪ ಹೆಬ್ಬೂರು ಗ್ರಾಮದ ಬಳಿ ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲು ಹಳಿ ಕೆಳಗೆ ಬಾಕ್ಸ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲು ಹಳಿ ಕೆಳಗೆ ಬಾಕ್ಸ್ ಅಳವಡಿಕೆ ಕಾಮಗಾರಿಯನ್ನು ಸಾಕಷ್ಟು ಅಡ್ಡಿ ಆತಂಕಗಳ ನಡುವೆಯೂ ಗುತ್ತಿಗೆದಾರರು ಕೇವಲ 31 ದಿನಗಳ ಒಳಗೆ ಪೂರ್ಣಗೊಳಿಸಿದ್ದಾರೆ.  ಇದಕ್ಕೆ ಶ್ರಮಿಸಿದ ಸಂಸದ ನಾರಾಯಣಸ್ವಾಮಿ, ರೈಲ್ವೆ ಇಲಾಖೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಕೋಟೇಶ್ವರರಾವ್ ಅವರನ್ನು ಅಭಿನಂದಿಸುವುದಾಗಿ ಹೇಳಿದರು.

06 ಲಕ್ಷ ಎಕರೆ ಭೂಮಿಗೆ ನೀರಾವರಿ ಕಲ್ಪಿಸಿ, ಬರಪೀಡಿತ ಪ್ರದೇಶಗಳಿಗೆ ಹರಿಯುವಂತಹ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಈಗ ವೇಗ ನೀಡಲಾಗಿದೆ.  ಸಂಸದ ನಾರಾಯಣಸ್ವಾಮಿ ಅವರ ಮನವಿಯಂತೆ, ರೈಲ್ವೆ ಅಂಡರ್ ಬಾಕ್ಸ್ ಅಳವಡಿಕೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.  ಅದರನ್ವಯ ನಿರೀಕ್ಷೆಗೂ ಮೀರಿ 31 ದಿನಗಳ ಒಳಗಾಗಿ ತ್ವರಿತವಾಗಿ ಈ ಕಾಮಗಾರಿ ಪೂರ್ಣಗೊಳಿಸಿರುವುದು ಸಂತಸ ತಂದಿದೆ.  ಈ ಬಾಕ್ಸ್ ಅಳವಡಿಕೆ ಮಾಡಿರುವ ಸ್ಥಳದ ಇಕ್ಕೆಲಗಳಲ್ಲಿ ಮಣ್ಣು ಸಡಿಲ ಇರುವುದರಿಂದ, ಇದನ್ನು ಆದಷ್ಟು ಎಚ್ಚರಿಕೆ ವಹಿಸಿ, ಗುಣಮಟ್ಟದಲ್ಲಿ ಕಾಲುವೆ ನಿರ್ಮಿಸುವ ಅಗತ್ಯವಿದೆ.  ಇಲ್ಲದಿದ್ದಲ್ಲಿ ಹೆಚ್ಚಿನ ಮಳೆ ಅಥವಾ ಪ್ರವಾಹ ಸಂದರ್ಭದಲ್ಲಿ ಕಾಲುವೆಯ ಅಕ್ಕಪಕ್ಕದ ಮಣ್ಣು ಕಾಲುವೆಯೊಳಗೆ ಕುಸಿದು ಬೀಳುವ ಸಂಭವವಿದೆ.  ಇದನ್ನು ಗಮನದಲ್ಲಿಟ್ಟುಕೊಂಡು, ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರೈಲ್ವೆ ಸಚಿವರು ಹೇಳಿದರು.

ರೈಲ್ವೆ ಅಂಡರ್ ಪಾಸ್ ನಂತಹ ಕಾಮಗಾರಿಗಳಲ್ಲಿ ಅಕ್ಕಪಕ್ಕದ ಪ್ರದೇಶದ ರೈತರಿಗೆ ತೊಂದರೆಯಾಗುತ್ತಿರುವುದು ಎಲ್ಲೆಡೆ ಕೇಳಿಬರುತ್ತಿರುವ ದೂರು.  ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಜ್ಞರಿಂದ ಸಲಹೆ ಪಡೆದು, ರೈತರಿಗೆ ತೊಂದರೆಯಾಗದ ರೀತಿ ಪರಿಹಾರ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು.  ಪ್ರಧಾನಿಗಳ ಆಶಯದಂತೆ ಹಳ್ಳಿ, ಶ್ರಮಿಕ ಹಾಗೂ ರೈತ ಇವರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.