ಚಿತ್ರದುರ್ಗ: ಜಿಲ್ಲೆಯಲ್ಲಿನ ಅಗಸರು ಮತ್ತು ಕ್ಷೌರಿಕ ವೃತ್ತಿ ನಿರ್ವಹಿಸುವ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದಿಂದ ನೀಡಲಾಗುವ 5 ಸಾವಿರ ರೂ. ಪರಿಹಾರ ಯೋಜನೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಆಗಸ್ಟ್ 10 ರವರೆಗೆ ವಿಸ್ತರಿಸಲಾಗಿದೆ.

ಕಾರ್ಮಿಕ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವ್ಯಾಪ್ತಿಗೆ ಒಳಪಡುವ ಅಸಂಘಟಿತ ಕಾರ್ಮಿಕರಾದ ಅಗಸರು ಹಾಗೂ ಕ್ಷೌರಿಕ ವೃತ್ತಿ ನಿರ್ವಹಿಸತ್ತಿರುವ ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂ. ನೀಡುವ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೊದಲು ಜು. 25 ರವರೆಗೆ ಅವಧಿ ವಿಸ್ತರಿಸಲಾಗಿತ್ತು.  ಆದರೆ ಕಾರ್ಮಿಕರು ಅರ್ಜಿ ಸಲ್ಲಿಸಲಾಗದೆ ಪರಿಹಾರದಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ, ಸೇವಾಸಿಂಧು ಪೋರ್ಟಲ್ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಆ. 10 ರವರೆಗೆ ವಿಸ್ತರಿಸಲಾಗಿದೆ.

ಅರ್ಹತೆಗಳು:

ಫಲಾನುಭವಿಯು ಕಡ್ಡಾಯವಾಗಿ ಕ್ಷೌರಿಕ ಅಥವಾ ಅಗಸ ವೃತ್ತಿಯಲ್ಲಿ ತೊಡಗಿರಬೇಕು. 18 ರಿಂದ 65 ವರ್ಷ ವಯೋಮಿತಿ ಒಳಗಿರಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬವಾಗಿರಬೇಕು(ಬಿ.ಪಿ.ಎಲ್). ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಪರಿಹಾರ ಸೌಲಭ್ಯ ಪಡೆಯಬಹುದು. ಹೊರ ರಾಜ್ಯದಿಂದ ವಲಸೆ ಬಂದು ವೃತ್ತಿ ನಿರ್ವಹಿಸುವ ಕಾರ್ಮಿಕರು ಸಹ ಪರಿಹಾರ ಪಡೆಯಬಹುದು.  ಅರ್ಜಿಗಳನ್ನು ಸೇವಾಸಿಂಧು   ವೆಬ್ ಪೋರ್ಟಲ್ https://sevasindhu.karnataka.gov.in ಮೂಲಕ ಸಲ್ಲಿಸಬೇಕು. ಸ್ವಯಂ ಘೋಷಣೆ ನಮೂನೆಯಲ್ಲಿ ಸಹಿ ಮಾಡಿ ಅರ್ಜಿ ಸಲ್ಲಿಸಬೇಕು.  ಅಗಸ ಮತ್ತು ಕ್ಷೌರಿಕರು ಉದ್ಯೋಗ ಧೃಢೀಕರಣ ಪತ್ರ ಹೊಂದಿರಬೇಕು. ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಮಹಿಳಾ ಫಲಾನುಭವಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರು.

ಸಲ್ಲಿಸಬೇಕಾದ ದಾಖಲೆ:

ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಉದ್ಯೋಗ ದೃಢೀಕರಣ ಪತ್ರ ಹಾಗೂ ಸ್ವಯಂ ಘೋಷಣೆ, ಜನ್ಮದಿನಾಂಕ ದಾಖಲೆ, ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ.

ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಬ್ಯಾಂಕ್ ಖಾತೆಗೆ ನೆರೆವಾಗಿ ವರ್ಗಾಯಿಸಲಾಗುವುದು. ಅರ್ಜಿ ಸಲ್ಲಿಸಲು ಆ. 10 ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾ ಕಾರ್ಮಿಕರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.