ಚಿತ್ರದುರ್ಗ: ಅಂಗವಿಕಲರೆಂಬ ಕೀಳರಿಮೆ ಬಿಟ್ಟು ಛಲ ಇಚ್ಚಾಶಕ್ತಿಯಿಂದ ಸ್ವಾಭಿಮಾನಿಗಳಾಗಿ ಜೀವನ ಸಾಗಿಸಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ವಿಕಲಚೇತನರಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿ ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಬಸವೇಶ್ವರ ವಿದ್ಯಾಸಂಸ್ಥೆ, ಚಿತ್ರದುರ್ಗ ಮೊಬಿಲಿಟಿ ಇಂಡಿಯಾ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ವಿಕಲಚೇತನರಿಗೆ ಬುಧವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಧನ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಹುಟ್ಟುವಾಗಲೆ ಅಂಗವಿಕಲನಾಗಬಹುದು. ಕೆಲವೊಮ್ಮೆ ನಾನಾ ಕಾರಣಗಳಿಂದ ಅಂಗವನ್ನು ಕಳೆದುಕೊಳ್ಳಬಹುದು. ವಿಕಲಚೇತನರು ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ಅನುಭವಿಸುವುದರಿಂದ ಉಳ್ಳವರು ದಾನಿಗಳು ವಿಕಲಚೇತನರ ನೆರವಿಗೆ ಮುಂದೆ ಬರಬೇಕು ಎಂದು ಹೇಳಿದರು.
ಪೂರ್ವಜನ್ಮದ ಶಾಪವೋ ಇಲ್ಲ ಸಮಸ್ಯೆಯಿಂದ ಕೆಲವರು ಅಂಗವಿಕಲರಾಗುವುದು ಸಹಜ. ಹಾಗಂತ ಅವರನ್ನು ಸಮಾಜ ಕೀಳಾಗಿ ನೋಡಬಾರದು. ವಿಕಲಚೇನರು ಜೀವನವಿಡಿ ಕೊರಗುವುದನ್ನು ಬಿಟ್ಟು ಸಾಹಸಮಯ ಗುಣ ಬೆಳೆಸಿಕೊಂಡು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಸಿರಿವಂತರು ಅದಕ್ಕಾಗಿ ಸಹಾಯ ಮಾಡಬೇಕು. ದಾನ, ತ್ಯಾಗ ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಸಿಂರೆಡ್ಡಿ ವಿಜಯ ಜೋತ್ಸ್ನ ಮಾತನಾಡುತ್ತ ಯಾವುದೇ ಒಬ್ಬ ಮನುಷ್ಯನಿಗೆ ಕೈಕಾಲು-ಕಣ್ಣು ಮುಖ್ಯವಲ್ಲ. ಸ್ವಚ್ಚವಾದ ಮನಸ್ಸು ಆತ್ಮಸ್ಥೈರ್ಯ ಬಹಳ ಮುಖ್ಯ. ಛಲ ಇದ್ದರೆ ಅಂಗವಿಕಲರು ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಸರ್ಕಾರ, ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಗಳು ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ನೀಡಿ ನೆರವು ಒದಗಿಸಬಹುದು. ಆದರೆ ಬೇರೆಯವರಿಗೆ ಹೊರೆಯಾಗದೆ ನಿಮಗೆ ನೀವೆ ಅವಲಂಭಿತರಾಗಬೇಕು ಎಂದು ವಿಕಲಚೇತನರಿಗೆ ತಿಳಿಸಿದರು.
ಹಣ ಮತ್ತು ಸಾಧನ ಸಲಕರಣೆಗಳನ್ನು ನೀಡುವುದರಿಂದ ವಿಕಲಚೇತನರ ಬದುಕು ಉದ್ದಾರವಾಗುವುದಿಲ್ಲ. ಅದಕ್ಕೆ ಬದಲಾಗಿ ನಿಮ್ಮ ಜೀವನದಲ್ಲಿ ನಿರ್ಧಿಷ್ಠವಾದ ಗುರಿಯಿಟ್ಟುಕೊಂಡು ತಲುಪ ದಾರಿ ಸರಿಯಿದ್ದಾಗ ಮಾತ್ರ ಯಶಸ್ಸು ಗಳಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಆರ್.ದಿಂಡಲಕೊಪ್ಪ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ನಾಗೇಶ್‌ಬಿಲ್ವಾ, ವೈಶಾಲಿ, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ.ಶಂಕರಪ್ಪ, ಎಸ್.ಕೆ.ಪ್ರಭಾವತಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕ ಬಿ.ಗಣೇಶ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಮೊಬಿಲಿಟಿ ಇಂಡಿಯಾ ಬೆಂಗಳೂರಿನ ವಿವೇಕ್, ಸುಧಾಕರ್, ಸುಲೇಮಾನ್ ಈ ಸಂದರ್ಭದಲ್ಲಿ ಹಾಜರಿದ್ದರು.
ಮಂಜುನಾಥ್ ನಾಡರ್ ನಿರೂಪಿಸಿದರು.
೫೨ ಮಂದಿ ವಿಕಲಚೇತನರಿಗೆ ವೀಲ್‌ಚೇರ್, ಕ್ಯಾಲಿಪರ್‍ಸ್, ಕೃತಕ ಕೈಕಾಲು, ಬುದ್ದಿಮಾಂಧ್ಯ ಮಕ್ಕಳಿಗೆ ಸ್ಪೆಷಲ್ ಚೇರ್‌ಗಳನ್ನು ವಿತರಿಸಲಾಯಿತು