ಮಂಗಳೂರು: ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಆಯ್ಕೆಯಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚಂದ್ರಶೇಖರ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಚಂದ್ರಶೇಖರ ಪಾಟೀಲ್ ಕುರಿತು ಒಂದಿಷ್ಟು ಮಾಹಿತಿ*
ಕನ್ನಡದ ಕವಿ, ನಾಟಕಕಾರ, ವಿಮರ್ಶಕ, ಹೋರಾಟಗಾರರಾದ ಚಂದ್ರಶೇಖರ ಪಾಟೀಲ್ `ಚಂಪಾ’ ಎಂದೇ ಪ್ರಸಿದ್ಧರು. 1939ರಲ್ಲಿ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದ ಚಂಪಾ ಹತ್ತಿಮತ್ತೂರು – ಹಾವೇರಿಗಳಲ್ಲಿ ಕನ್ನಡ ಶಾಲೆ-ಹೈಸ್ಕೂಲ್ ಮುಗಿಸಿ, 1956 ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿದರು. 1960ರಲ್ಲಿ ಬಿ.ಎ. ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1962 ರಲ್ಲಿ ಎಂ.ಎ.ಮಾಡಿದರು. 1963 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. 1996 ರಲ್ಲಿ ಪ್ರೊಫೆಸರ್ ಮತ್ತು ಚೇರ್ಮನ್‍ರಾದರು.

1980-82 ರಲ್ಲಿ ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೋಕಾಕ್ ಚಳವಳಿಗೆ ಪ್ರೇರಣೆ ನೀಡಿದ ಪ್ರಮುಖರಲ್ಲಿ ಚಂಪಾ ಒಬ್ಬರು.

ನವೆಂಬರ್ 2004 ರಿಂದ ರಿಂದ 2008 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಅಂತರಂಗ ನಾಟಕ ಕೂಟ ‘ಮ್ಯಾಳ’ ಮುಂತಾದ ಸಂಸ್ಥೆಗಳ ಮೂಲಕ ರಂಗಚಳುವಳಿಯಲ್ಲಿ ಕ್ರಿಯಾಶೀಲರಾದವರು. ಬಾನು ಕವನ ಸಂಕಲನ, ಗೋಕರ್ಣದ ಗೌಡಶಾನಿ ನಾಟಕ, ಗಾಂಧೀಸ್ಮರಣ ಕವನ ಸಂಕಲಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿಗಳು ದೊರೆತಿವೆ.ಇದರೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಮಾಧ್ಯಮ ಪ್ರಶಸ್ತಿ ಇವರಿಗೆ ಲಭ್ಯವಾಗಿವೆ.

ಸಂಕ್ರಮಣ ಸಾಹಿತ್ಯ ಪತ್ರಿಕೆಯನ್ನು ಕಳೆದ 50 ವರ್ಷಗಳಿಂದ ನಿರಂತರವಾಗಿ ಪ್ರಕಟಿಸುತ್ತಿರುವ ಇವರು ಹತ್ತಕ್ಕೂ  ಹೆಚ್ಚು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಬಾನುಲಿ, ಮಧ್ಯಬಿಂದು, ಹೂವು ಹಣ್ಣು ತಾರೆ, ಓ ಎನ್ನ ದೇಶ ಬಾಂಧವರೇ, ಗುಂಡಮ್ಮನ ಹಾಡು ಮೊದಲಾದ ಕವನ ಸಂಗ್ರಹ ಹೊರತಂದಿದ್ದಾರೆ. ಕೊಡೆಗಳು, ಗೋಕರ್ಣದ ಗೌಡಶಾನಿ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಬೇಂದ್ರೆ-ನಾನು ಕಂಡಂತೆ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ಚಂಪಾದಕೀಯ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷಿನಲ್ಲಿ ಹತ್ತಾರು ನಿಯತಕಾಲಿಕೆಗಳಿಗೆ ಲೇಖಕರಾಗಿರುವ ಇವರು ಇಂಗ್ಲಿಷಿನಲ್ಲಿ ಪೊಯಮ್ಸ್ ಅಂಡ್ ಪ್ಲೇಸ್ ಎಂಬ ಗ್ರಂಥವನ್ನು ಕನ್ನಡದಿಂದ ಅನುವಾದಿಸಿದ ಕೃತಿ ಹೊರತಂದಿದ್ದಾರೆ.

ಚಂಪಾ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೆಲವು ನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದರು ಅದರಲ್ಲಿ, ಶನಿವಾರದ ಪುಸ್ತಕಸಂತೆ ಕಾರ್ಯಕ್ರಮವೂ ಒಂದು. ಪ್ರತಿಶನಿವಾರವೂ ಪರಿಷತ್ತಿನ ಅಂಗಳದಲ್ಲಿ ಕನ್ನಡ ಪುಸ್ತಕ ಪ್ರಕಾಶಕರನ್ನು ಮತ್ತು ಮಾರಾಟಗಾರರನ್ನು ಆಹ್ವಾನಿಸಿ ರಿಯಾಯಿತಿ ದರದಲ್ಲಿ ಓದುಗರಿಗೆ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಿದರು. ಸಾಹಿತ್ಯಪ್ರಿಯರ ಮೆಚ್ಚುಗೆ ಪಡೆದ ಈ ಯೋಜನೆ ಅವರ ಅಧಿಕಾರಾವಧಿಯ ಅಂತ್ಯದವರೆಗೂ ಚಾಲ್ತಿಯಲ್ಲಿತ್ತು.

ಚಂಪಾ ಅವರು “ಅಧ್ಯಕ್ಷರ ಪುಸ್ತಕನಿಧಿ”ಯನ್ನು ಪ್ರಾರಂಭಿಸಿದರು. ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜನ ಗೌರವ-ಸನ್ಮಾನಾರ್ಥವಾಗಿ ಹಾಕುತ್ತಿದ್ದ ಶಾಲು-ಹಾರಗಳ ಬದಲಿಗೆಕನ್ನಡ ಪುಸ್ತಕಗಳನ್ನು ನೀಡಲು ಮನವಿ ಮಾಡಿದರು. ಸಂಗ್ರಹವಾದ ಸಾವಿರಾರು ಪುಸ್ತಕಗಳನ್ನು ಗಡಿನಾಡ ಕನ್ನಡ ಗ್ರಂಥ ಭಂಡಾರಗಳಿಗೆ, ಗ್ರಾಮೀಣ ಗ್ರಂಥಾಲಯಗಳಿಗೆ ಉಚಿತವಾಗಿ `ಪುಸ್ತಕನಿಧಿ’ಯಿಂದ ಪುಸ್ತಕಗಳನ್ನು ಕಳುಹಿಸಿದರು.
ಹತ್ತು ಹಲವು ಕನ್ನಡ ಪರ ಹೋರಾಟಗಳನ್ನು ರೂಪಿಸಿದ ಕೀರ್ತಿಯೂ ಚಂಪಾ ಅವರಿಗಿದೆ.