ಶಂಕರಘಟ್ಟ: ಎಂ.ಕೆ. ಇಂದಿರಾ ಅವರು ಬರವಣಿಗೆಯನ್ನು ಪ್ರಾರಂಭಿಸಿದ ಕಾಲಘಟ್ಟ ಅರವತ್ತರ ದಶಕ, ನವ್ಯ ಸಾಹಿತ್ಯದ ಉತ್ತುಂಗ ಸಂದರ್ಭವಾಗಿತ್ತು. ನವ್ಯದ ಪ್ರಭಾವವನ್ನು ಮೀರಿ ಬರೆಯುವ ಅನಿವಾರ್ಯತೆ ಅವರಿಗಿತ್ತು. ಅಂತಹ ಸಮಯದಲ್ಲಿ ನವ್ಯದ ಪ್ರಜ್ಞೆಯಿಂದ ಸಂಪೂರ್ಣ ಭಿನ್ನವಾಗಿ ಎಂ.ಕೆ, ಇಂದಿರಾ ಸಾಹಿತ್ಯ ಕೃತಿಗಳನ್ನು ರಚಿಸಿದರು ಎಂದು ಪ್ರೊ ಅರವಿಂದ ಮಾಲಗತ್ತಿ ಹೇಳಿದರು.

ಕರ್ನಾಟಕ ಸಾಹಿತ್ಯ ಆಕಾಡೆಮಿ ಹಾಗೂ ಕುವೆಂಪು ವಿಶ್ವವಿದ್ಯಾಲಯ ಕನ್ನಡಭಾರತಿ ಇವರ ಸಹಯೋಗದಲ್ಲಿ ಪ್ರೊ. ಎಸ್.ಪಿ.ಹಿರೇಮಠ ಸಭಾಂಗಣದಲ್ಲಿ ಜರುಗಿದ ಎಂ.ಕೆ.ಇಂದಿರಾ ಜನ್ಮಶತಮಾನೋತ್ಸವ-ವಿಚಾರ ಸಂಕಿರಣ-ಸಂವಾದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಮ್ಮ ನಲವತ್ತನೆಯ ವಯಸ್ಸಿನಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿದ ಇಂದಿರಾ ಅವರದು ಜೀವನಾನುಭವದಲ್ಲಿ ಪಕ್ವಗೊಂಡ ಹದವತ್ತಾದ ಸಾಹಿತ್ಯ ಎಂ.ಕೆ.ಇಂದಿರಾ ಅವರದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಎಂ.ಕೆ. ಇಂದಿರಾ ಅವರು ಜನಮನ್ನಣೆಯನ್ನು ಪಡೆದಿದ್ದರೂ ಸಾಹಿತ್ಯ ವಲಯದಲ್ಲಿ ನಿರ್ಲಕ್ಷಿತರಾಗಿದ್ದರು. ಜನಪ್ರಿಯ ಸಾಹಿತ್ಯ ಹಾಗೂ ಗಂಭೀರ ಸಾಹಿತ್ಯ ಇವುಗಳ ನಡುವೆ ಬೇರೆಯದೆ ಆದ ಹಿತವತ್ತಾದ ಸಂವೇದನೆಯನ್ನು ಎಂ.ಕೆ. ಇಂದಿರಾ ಅವರ ಸಾಹಿತ್ಯ ಹೊಂದಿತ್ತು. ಒಂದು ಕಾಲದ ಪಲ್ಲಟಗಳನ್ನು ಗ್ರಹಿಸುವ ದೃಷ್ಟಿಯಿಂದ ನೋಡಿದರೆ ಇಂದಿರಾ ಅವರ ಸಾಹಿತ್ಯದ ಮಹತ್ವ ಅರಿವಾಗುತ್ತದೆ. ಇಂದಿರಾ ಅವರ ಸಾಹಿತ್ಯ ಕೃತಿಗಳಲ್ಲಿ ಜರುಗುವ ಪಲ್ಲಟದ ಸ್ವರೂಪವು ಒಮ್ಮೆಲೆ ಆಗುವುದಿಲ್ಲ. ಸಮಾಜ ಹಂತ-ಹಂತವಾಗಿ ಬದಲಾವಣೆಗೆ ಒಳಪಡುತ್ತಿರುವುದನ್ನು ಇಂದಿರಾ ಅವರ ಸಾಹಿತ್ಯದ ಒಳನೋಟಗಳಲ್ಲಿ ಕಾಣಬಹುದು ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಜೋಗನ್ ಶಂಕರ್ ಉದ್ಘಾಟಿಸಿದರು. ಕನ್ನಡಭಾರತಿಯ ನಿರ್ದೇಶಕರಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಕನ್ನಡಭಾರತಿಯ ಪ್ರಾಧ್ಯಾಪಕರಾದ ಪ್ರೊ, ಜಿ.ಪ್ರಶಾಂತ್ ನಾಯಕ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಅಕಾಡೆಮಿಯ ರಿಜಿಸ್ಟಾರ್ ಆದ ಸಿ.ಹೆಚ್. ಭಾಗ್ಯ ವಂದಿಸಿದರು. ಧರ್ಮಪ್ಪ ಪ್ರಾರ್ಥಿಸಿದರು. ನವೀನ್ ಮಂಡಗದ್ದೆ ನಿರೂಪಿಸಿದರು.